ಸಚಿವ ಸ್ಥಾನ ಸಿಗದೆ ಮಧು ಬಂಗಾರಪ್ಪ ಅಸಮಾಧಾನ: ಶಿವಣ್ಣ ದಂಪತಿ ಭೇಟಿಯಾದ ಸುರ್ಜೇವಾಲ!
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಶಿವರಾಜ್ ಕುಮಾರ್ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ನಾಗವಾರದಲ್ಲಿರುವ ಸೆಂಚುರಿ ಸ್ಟಾರ್ ನಿವಾಸಕ್ಕೆ ತೆರಳಿರುವ ಸುರ್ಜೇವಾಲ, ಶಿವಣ್ಣನ ಜೊತೆಗೆ ಮಾತುಕತೆ ನಡೆಸಿದ್ದು, ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಸೊರಬ ಶಾಸಕ ಮಧು ಬಂಗಾರಪ್ಪ ಅಸಮಾಧಾನಗೊಂಡಿದ್ದಾರೆ ಎಂಬ ಬಗ್ಗೆ ವರದಿಯಾಗಿತ್ತು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಅವರನ್ನು ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್, ಫಲಿತಾಂಶ ಬಂದ ನಂತರ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಿದೆ. ಹಿಂದುಳಿದ ವರ್ಗಕ್ಕೆ ಸೂಕ್ತ ನ್ಯಾಯ ಒದಗಿಸಿಲ್ಲ ಎಂದು ಮಧು ಬಂಗಾರಪ್ಪ ಬೇಸರಗೊಂಡಿದ್ದರು. ಇದೇ ಕಾರಣದಿಂದ ಅವರು ಮುಖ್ಯಮಂತ್ರಿ ಪದ ಗ್ರಹಣ ಸಮಾರಂಭದಿಂದಲೂ ದೂರ ಉಳಿದಿದ್ದರೂ ಎನ್ನಲಾಗಿದೆ.
ಶಿವರಾಜ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡರೂ ಮಧುಗೆ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಶಿವರಾಜ್ ಕುಮಾರ್ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ನಾಗವಾರದಲ್ಲಿರುವ ಸೆಂಚುರಿ ಸ್ಟಾರ್ ನಿವಾಸಕ್ಕೆ ತೆರಳಿರುವ ಸುರ್ಜೇವಾಲ, ಶಿವಣ್ಣನ ಜೊತೆಗೆ ಮಾತುಕತೆ ನಡೆಸಿದ್ದು, ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಸುರ್ಜೇವಾಲ, ‘ಕಾಂಗ್ರೆಸ್ ಪ್ರಚಾರಕ್ಕೆ ಶಕ್ತಿ ತುಂಬಿದ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಜನಪ್ರಿಯ ಕಲಾವಿದ ಮತ್ತು ಅದ್ಭುತ ವ್ಯಕ್ತಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
‘ತಮ್ಮ ವಿಶಿಷ್ಟ ಪರಂಪರೆಯೊಂದಿಗೆ ಗೀತಾ ಶಿವರಾಜಕುಮಾರ್ ಈಗಾಗಲೇ ಕಾಂಗ್ರೆಸ್ ಕುಟುಂಬದ ಭಾಗವಾಗಿದ್ದಾರೆ. ಕರ್ನಾಟಕವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಪ್ರತಿಜ್ಞೆಯ ಮೇಲೆ ಒಟ್ಟಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. (ಕಪ್ರಡಾ)