ಕನಕದಾಸ ಗಲ್ಲಿ, ಅಮೀನಾ ಸರ್ಕಲ್ ಗಳಲ್ಲಿ ರಸ್ತೆ ಬಂದ್ ಮಾಡಲಾಗಿದೆ….
ಹಾಳದಕಟ್ಟಾದಲ್ಲಿ ಕುಡಿಯುವ ನೀರಿಲ್ಲ ಪ.ಪಂ. ನನಗೆ ಒಂದು ಕೊಡ ನೀರೂ ಕೊಟ್ಟಿಲ್ಲ.
ಹೆಸ್ಕಾಂ ಲೈನ್ ಗೆ ತಾಕುವ ಗಿಡ ಕತ್ತರಿಸಿಲ್ಲ, ಬಹಳಷ್ಟು ಪಂಚಾಯತ್ ಗಳ ವ್ಯಾಪ್ತಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ.
ತಾಲೂಕಾ ಪಂಚಾಯತ್ ಇ.ಓ.ಕಾರ್ಯನಿರ್ವಹಣೆ ಸರಿ ಇಲ್ಲ……
ಹೀಗೆ ಸಭಿಕರಿಂದ ಅಹವಾಲುಗಳ ಸರಪಳಿ ಹರಿದು ಬಂದಿದ್ದು ಯಾವುದೇ ಜನಸ್ಫಂದನ ಕಾರ್ಯಕ್ರಮದಲ್ಲಲ್ಲ ಬದಲಾಗಿ ನೂತನ ಶಾಸಕ ಭೀಮಣ್ಣ ನಾಯ್ಕರ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆಯ ಮೊದಲ ಸಭೆಯಲ್ಲಿ.!
ಸಿದ್ದಾಪುರ ತಹಸಿಲ್ಧಾರ ಕಛೇರಿಯ ಸಭಾಭವನದಲ್ಲಿ ನೂತನ ಶಾಸಕ ಭೀಮಣ್ಣ ನಾಯ್ಕರ ಅಧ್ಯಕ್ಷತೆಯಲ್ಲಿ ಮೊಟ್ಟ ಮೊದಲ ಪ್ರಗತಿಪರಿಶೀಲನಾ ಸಭೆ ನಡೆಯಿತು.
ನಿಯಮ, ರಿವಾಜುಗಳಂತೆ ತಾಲೂಕಿನ ಬಹುತೇಕ ಎಲ್ಲಾ ಹಿರಿಯ ಅಧಿಕಾರಿಗಳು ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದರು.
ನೂತನ ಶಾಸಕ ಭೀಮಣ್ಣ ನಾಯ್ಕರನ್ನು ಅಭಿನಂದಿಸಲು ಬಂದಿದ್ದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ದಂಡು ಶಾಸಕರೊಟ್ಟಿಗೆ ಪ್ರಗತಿಪರಿಶೀಲನಾ ಸಭೆಗೂ ದಾಂಗುಡಿ ಇಟ್ಟಿತ್ತು. ತಮ್ಮ ನೆಚ್ಚಿನ ಶಾಸಕರು ಹೇಗೆ ಸಭೆ ನಡೆಸುತ್ತಾರೆ ಎನ್ನುವ ಕುತೂಹಲದಿಂದ ಬಂದಿದ್ದರೋ!?
ಅಥವಾ ಕಾಂಗ್ರೆಸ್ ಪಕ್ಷದ ಲಾಗಾಯ್ತಿನ ನಡವಳಿಕೆಯಂತೆ ನೂತನ ಶಾಸಕರ ಕಾಂಗ್ರೆಸ್ ಕಾರ್ಯಕರ್ತರ ಪಡೆ ಸಭೆಗೆ ಆಗಮಿಸಿತ್ತೋ? ಒಟ್ಟೂ ಈ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗಿನ ಶಾಸಕರ ಚರ್ಚೆ ಬದಲಾಗಿ ಕಾರ್ಯಕರ್ತರ ಅಹವಾಲು ಸ್ವೀಕಾರ ಸಭೆಯಂತೆ ಈ ಸಂದರ್ಭ ಭಾಸವಾಯಿತು.
ಶಾಸಕರ ಸಭೆ ಸಮನ್ವಯ ಮಾಡುತಿದ್ದ ಸಹಾಯಕ ಕಮೀಷನರ್ ದೇವರಾಜ್ ಆರ್.ವಿವಿಧ ಇಲಾಖೆಗಳ ಅಧಿಕಾರಿಗಳಿಂದ ವರದಿ ಕೇಳುತಿದ್ದರೆ… ಕಾರ್ಯಕರ್ತರು, ಮುಖಂಡರು ತಮ್ಮ ಕುಂದು-ಕೊರತೆ, ಸಮಸ್ಯೆಗಳನ್ನು ಕೇಳಲು ಶುರು ಹಚ್ಚಿಕೊಂಡರು.
ಈ ಸಂದರ್ಭವನ್ನು ಜಾಣತನದಿಂದ ನಿಭಾಯಿಸಿದ ಎ.ಸಿ. ದೇವರಾಜ್ ಶಾಸಕರ ಅಭಿಮಾನಿ ದೇವರುಗಳನ್ನು ನಿಯಂತ್ರಿಸಿ ಪ್ರಗತಿಪರಿಶೀಲನೆಯ ಸಮನ್ವಯ ನಡೆಸಿದರು.
ಪ.ಪಂ. ಸೇರಿದಂತೆ ತಾಲೂಕಿನ ನೀರಿನ ಸಮಸ್ಯೆಯ ಬಗ್ಗೆ ಎರಡು ದಿವಸದೊಳಗೆ ಸಂಪೂರ್ಣ ಮಾಹಿತಿ ನೀಡಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಸೇರಿದಂತೆ ವಿವಿಧ ಇಲಾಖೆಗಳಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಪೂರೈಸುವಂತೆ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.