ಕುಮಟಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ನಿಂದ ವಿಧಾನಸಭಾ ಚುನಾವಣೆಗೆ ಸ್ಫರ್ಧಿಸಿ ಕೇವಲ 600 ಮತಗಳಿಂದ ವಿರೋಚಿತ ಸೋಲನ್ನನುಭವಿಸಿರುವ ಸೂರಜ್ ನಾಯ್ಕ ಸೋನಿಯವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಕಾಂಗ್ರೆಸ್ ಯೋಚಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಿ.ಜೆ.ಪಿ.ಯ ಹಿರಿಯ ನಾಯಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಕ್ಷೇತ್ರದಲ್ಲಿ ಸೋಲನ್ನನುಭವಿಸಿರುವುದರಿಂದ ತನಗೇ ಉತ್ತರ ಕನ್ನಡ ಜಿಲ್ಲೆಯಿಂದ ಲೋಕಸಭಾ ಅಭ್ಯರ್ಥಿಯನ್ನಾಗಿಸಬೇಕು ಎಂದು ಟವೆಲ್ ಹಾಕಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎನ್ನುವ ಗುಟ್ಟು ಈಗ ಬಹಿರಂಗವಾಗಿದೆ.
ಬಿ.ಜೆ.ಪಿ.ಯಿಂದ ಲೋಕಸಭಾ ಅಭ್ಯರ್ಥಿಯಾಗುವ ದೂರಾಲೋಚನೆಯಿಂದ ಇತ್ತೀಚೆಗೆ ಬಿ.ಜೆ.ಪಿ. ಸೇರಿದ್ದ ಶಶಿಭೂಷಣ ಹೆಗಡೆ ಹೊಸ ಬೆಳವಣಿಗೆಗಳಿಂದ ಕಂಗಾಲಾಗಿ ಸೀದಾ ದೆಹಲಿಗೆ ತೆರಳಿ, ಬಿ.ಜೆ.ಪಿ. ಉತ್ತರ ಕನ್ನಡ ಲೋಕಸಭಾ ಟಿಕೇಟ್ ಕಾಯ್ದಿರಿಸಲು ಬಿ.ಜೆ.ಪಿ. ಕೇಂದ್ರ ನಾಯಕರ ದುಂಬಾಲುಬಿದ್ದಿದ್ದಾರೆ ಎಂದು ಮಾಹಿತಿ ದೊರೆತಿದೆ.
ಹೀಗೆ ಉತ್ತರ ಕನ್ನಡ ಜಿಲ್ಲೆಯಿಂದ ಲೋಕಸಭಾ ಸದಸ್ಯರಾಗಲು ಕಾರವಾರದ ವಸಂತ್ ಅಸ್ನೋಟಿಕರ್, ಕುಮಟಾದ ಸೂರಜ್ ನಾಯ್ಕ, ಭಟ್ಕಳದ ಜೆ.ಡಿ.ನಾಯ್ಕ,ಸುನಿಲ್ ನಾಯ್ಕ,ಸಿದ್ಧಾಪುರದ ಕೆ.ಜಿ.ನಾಯ್ಕ, ಶಶಿಭೂಷಣ ಹೆಗಡೆ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳದ ಪ್ರಶಾಂತ್ ದೇಶಪಾಂಡೆ ಸೇರಿದಂತೆ ಕನಿಷ್ಠ ಒಂದು ಡಜನ್ ನಾಯಕರು ಸಿದ್ಧರಾಗುತಿದ್ದಾರೆ.
ವಾಸ್ತವವೇನೆಂದರೆ… ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾದಳವಾಗಲಿ,ಬಿ.ಜೆ.ಪಿ.ಯಾಗಲಿ ಲೋಕಸಭಾ ಚುನಾವಣೆ ಗೆಲ್ಲುವ ಶಕ್ತಿ ಹೊಂದಿಲ್ಲ. ಮೋದಿ, ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಸೇರಿದಂತೆ ಯಾರೂ ಮುಳುಗುವ ಹಡಗಾಗಿರುವ ಬಿ.ಜೆ.ಪಿ.ಯನ್ನು ಗೆಲ್ಲಿಸುವ ಸ್ಥಿತಿಯಲ್ಲಿಲ್ಲ ಈ ಕಾರಣಗಳಿಂದ 4 ಜನ ಶಾಸಕರನ್ನು ಉತ್ತರ ಕನ್ನಡದಲ್ಲಿ ಮತ್ತು ಬೆಳಗಾವಿಯ ಒಬ್ಬರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಈಗ ಕೇವಲ ಮೂರು ಶಾಸಕಸ್ಥಾನಗಳಿಗೆ ಇಳಿದಿರುವ ಬಿ.ಜೆ.ಪಿ.ಯನ್ನು ಸೋಲಿಸುವ ಶಕ್ತಿ ಹೊಂದಿದೆ ಎನ್ನುವ ಹಿನ್ನೆಲೆಯಲ್ಲಿ ಆನಂದ ಅಸ್ನೋಟಿಕರ್, ಸೂರಜ್ ನಾಯ್ಕ, ಪ್ರಶಾಂತ್ ದೇಶಪಾಂಡೆ ಸೇರಿದಂತೆ ಅನೇಕರು ಕಾಂಗ್ರೆಸ್ ಅಭ್ಯರ್ಥಿಯಾಗಲು ತೆರೆಮರೆಯ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.!