ಸಕಾರಣವೋ? ವಿನಾಕಾರಣವೋ ನಿರಾಕರಣೆಗೆ ಒಳಗಾಗುವುದು ಬಹು ಕಷ್ಟದ ಕೆಲಸ. ಧೂಳಿನ ಅಲರ್ಜಿ ಇರುವವರ ಮೂಗು ಧೂಳನ್ನು ಹೇಗೆ ನಿರಾಕರಿಸತ್ತದೆಂದರೆ…. ನಿರಾಕರಣೆ ಬಾಯಿ, ಮೂಗಿನಿಂದ ಬಂದರೂ ದೇಹ ನಾಭಿಯಾಳದಿಂದಲೇ ಸಡನ್ ಆಗಿ ಪ್ರತಿಕ್ರೀಯಿಸಿಬಿಡುತ್ತೆ!
ನಿರಾಕರಣೆಯೆಂದರೆ ಪ್ರೀತಿ- ಪ್ರೇಮಕ್ಕೆ ಮಾತ್ರ ಸೀಮಿತವಾದದ್ದಲ್ಲ… ಮಗ ಅಪ್ಪನನ್ನು ನಿರಾಕರಿಸುವುದು, ಹೆಂಡತಿ ಗಂಡನನ್ನು ನಿರಾಕರಿಸುವುದು, ಗಂಡ ಪತ್ನಿಯನ್ನು ನಿರಾಕರಿಸುವುದು, ಅಪ್ಪ ಮಗನನ್ನು ನಿರಾಕರಿಸುವುದು, ಅಣ್ಣ ತಂಗಿಯನ್ನು ನಿರಾಕರಿಸುವುದು, ಅಕ್ಕ ತಮ್ಮನನ್ನು ನಿರಾಕರಿಸುವುದು, ಸಹಾಯಕ ಬಾಸ್ ನನ್ನು ನಿರಾಕರಿಸುವುದು, ಬಾಸ್ ಸೇವಕನನ್ನು ನಿರಾಕರಿಸುವುದು, ಶಿಕ್ಷಕ ವಿದ್ಯಾರ್ಥಿಯನ್ನು ನಿರಾಕರಿಸುವುದು,ವಿದ್ಯಾರ್ಥಿ ಉಪನ್ಯಾಸಕನನ್ನು ನಿರಾಕರಿಸುವುದು, ಮತದಾರರು ನಾಯಕನನ್ನು ನಿರಾಕರಿಸುವುದು, ಮುಖಂಡ ಮತದಾರರನ್ನು ನಿರಾಕರಿಸುವುದು ಹೀಗೆ ನಿರಾಕರಣೆ ನುಗ್ಗದ ಕ್ಷೇತ್ರಗಳೇ ಇಲ್ಲ.
ಒಬ್ಬ ಅಪ್ಪ ತನ್ನ ಎರಡ್ಮೂರು ಮಕ್ಕಳ ಸಂಸಾರವನ್ನು ಬಿಟ್ಟು ತೀರ್ಥಕ್ಷೇತ್ರಗಳನ್ನು ಅರಸಿ ಹೊರಟು ಬಿಡುತಿದ್ದ. ಹೀಗೆ ತನ್ನ ಕುಟುಂಬಕ್ಕೆ ಬೆನ್ನುತಿರುಗಿಸಿ ಹೊರಟವನು ವಾರ, ಪಾಕ್ಷಿಕ, ತಿಂಗಳು ಎರಡು ತಿಂಗಳು ಕೆಲವು ತಿಂಗಳುಗಳ ವರೆಗೆ ಮರಳಿ ಬರುತ್ತಲೇ ಇರಲಿಲ್ಲ! ಹೀಗೆ ಹೊರಟು ಹೋದವನು ಅದ್ಯಾವಾಗಾದರೂ ಬಂದು ಹೆಂಡತಿ ಮಕ್ಕಳ ಮುಖ ನೋಡಿದಾಗ ವಾಸ್ತವದಲ್ಲಿ ಆ ಮುಖ ಕಂಡೊಡನೆ ಮಂದಹಾಸ ಸೂಸಬೇಕಾದ ಆ ಕುಟುಂಬದ ನಿರಾಕರಣ ಭಾವ ಹೇಗಿರುತ್ತಿತ್ತೆಂದರೆ…. ಈತ ಬರದಿದ್ದರೆ ನಾವು ಚೆನ್ನಾಗಿರುತಿದ್ದೆವು ಎಂಬುವಷ್ಟು!
ಇಂಥ ನಿರಾಕರಣದ ಮುಂದೆ ಅದ್ಯಾವುದೋ ತಿರುವಿನಲ್ಲಿ ಸಿಕ್ಕವಳು ವಾರ ತಿಂಗಳು, ವರ್ಷಗಳ ನಂತರ ಬಿಟ್ಟೊರಡುವಾಗಿನ ನಿರಾಕರಣೆ ಇರುತ್ತದಲ್ಲ ಅದ್ಯಾವಲೆಕ್ಕ? ಹಾಗೆ ಯಾವುದೋ ಕಾರಣಕ್ಕೆ, ಏನೋ ಅನಿವಾರ್ಯತೆಗೆ ಸಿಕ್ಕವನ್ನು ತನ್ನ ಹುಡುಗಿಯನ್ನು ಬಿಟ್ಟುಹೋಗುವುದು ಕೊಡುವ ನೋವು ಅದ್ಯಾವ ಚುಕ್ಕೆಗೆ ಸಮ. ಅದಕ್ಕೆ ಬ್ರೇಕ್ ಅಪ್ ಎಂದು ಕರೆದುಕೊಳ್ಳುತ್ತಾಳೆ. ನಿಜಕ್ಕೂ ಬ್ರೇಕ್ ಅಪ್ ಎಂದರೆ ಬೇಜವಾಬ್ದಾರಿ ತಂದೆ ತಾಯಿಯನ್ನು ನಿರಾಕರಿಸಿ ಆತ್ಮಹತ್ಯೆಯನ್ನು ಆಯ್ದುಕೊಂಡು ಬಿಡುತ್ತಾನಲ್ಲ ಅಮಾಯಕ ಹುಡುಗ ಅದು ಬ್ರೇಕ್ ಅಪ್.
ಇವೆಲ್ಲಾ ಯಾಕೆ ನೆನಪಾದವೆಂದರೆ ಬಹಳ ಮನೆಗಳಲ್ಲಿ ಕಾಣುವ ನಿರ್ಜೀವ ದೇವರ ಪುಟಗಳ ಮಧ್ಯೆ, ವಯಸ್ಸಾಗಿ ಕೊನೆಯುಸಿರೆಳೆದ ನಾಲ್ಕೈದು ಅಜ್ಜಿ-ಅಜ್ಜಂದಿರ ಪಟಗಳ ನಡುವೆ ಇನ್ನೂ ಸರಿಯಾಗಿ ಮೀಸೆ ಬಾರದ, ದಾಡಿ ಹಣ್ಣಾಗದ,ಯುವಕತನದ ಮುಗ್ದತೆ ಮಾಸದ ಪೋಟೋಗಳು ನೇತಾಡುತ್ತಾ ಕೆಲವೆಡೆ ಅಲುಗಾಡದೆ ಚಿರಸ್ಥಾಯಿಯಾಗಿತ್ತವಲ್ಲ… ಆ ಪೊಟೋಗಳ ಜೀವಂತ ಮುಖಗಳು ಅದ್ಯಾವ ನಿರಾಕರಣೆಯಿಂದ ದೂರಸಾಗಿರುತ್ತಾರೆ?!