

ಈ ವಾರದ ಪ್ರಾರಂಭದಲ್ಲಿ ಕುಮಟಾ ದೇವಿಮನೆ ಘಟ್ಟದ ಬಳಿ ಪತ್ತೆಯಾಗಿದ್ದ ಅಪರಿಚಿತ ಮಹಿಳಾ ಶವ ಯಲ್ಲವ್ವ ಯಾನೆ ತನುಜಾ ದೊಡ್ಮನಿ ಎಂದು ಖಾತ್ರಿಯಾಗಿದ್ದು ಇದೊಂದು ಕೊಲೆ ಪ್ರಕರಣ ಎನ್ನುವುದನ್ನು ಕುಮಟಾ ಪೊಲೀಸರು ಪತ್ತೆ ಮಾಡಿದ್ದಾರೆ.

೨೬ ವರ್ಷದ ಶಿಗ್ಗಾಂವ ನ ತನುಜಾ ಶವ ದೇವಿಮನೆ ಘಟ್ಟದ ಬಳಿ ಪತ್ತೆಯಾಗುತ್ತಲೇ ಪೊಲೀಸರು ಸಾರ್ವಜನಿಕ ಪ್ರಕಟಣೆ ನೀಡಿದ್ದರು. ಈ ಘಟನೆಯನ್ನು ಕೆದಕುತ್ತಾ ಹೋದ ಉತ್ತರ ಕನ್ನಡ ಪೊಲೀಸರಿಗೆ ಈ ಶವದ ಹಿಂದೆ ಇರುವ ಸಂಘಟಿತ ಕೊಲೆಯ ರಹಸ್ಯ ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಉತ್ತರ ಕನ್ನಡ ಮತ್ತು ಗದಗದ ತಲಾ ಒಬ್ಬರು ಹಾಗೂ ಶಿಗ್ಗಾಂವನ ಮೂವರನ್ನು ಬಂಧಿಸಲಾಗಿದೆ. ಗದಗದ ಒಬ್ಬ ವ್ಯಕ್ತಿ ಮತ್ತು ಮುಂಡಗೋಡಿನ ಇಂದೂರಿನ ಒಬ್ಬ ವ್ಯಕ್ತಿ ಈ ಕೊಲೆಗೆ ಸಹಕರಿಸಿದ ಬಗ್ಗೆ ಆರೋಪ ಮಾಡಲಾಗಿದ್ದು ಇಂದೂರಿನ ಅಮಿತ್ ಗೋಖಲೆ ಎನ್ನುವ ವ್ಯಕ್ತಿ ಮಹಿಳೆಯ ಶವ ಸಾಗಿಸಲು ಇತರ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಶವ- ಸಾಗಾಟ, ಕೊಲೆ ಷಡ್ಯಂತ್ರಕ್ಕೆ ಬಳಸಿದ ಕ್ರೂಸರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲ್ಲವ್ವ ಯಾನೆ ತನುಜಾ ಎನ್ನುವ ವಿವಾಹಿತ ಮಹಿಳೆಗೆ ಇಬ್ಬರು ಮಕ್ಕಳಿದ್ದು ಅವರ ಕುಟುಂಬಸ್ಥರೇ ವ್ಯೂಹ ರಚಿಸಿ ಊಟದಲ್ಲಿ ನಿದ್ರೆಗುಳಿಗೆ ಹಾಕಿ ನಂತರ ಕೊಲೆ ಮಾಡಿ ಅನ್ಯರ ನೆರವು ಪಡೆದು ಶವವನ್ನು ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಮನೆ ಘಟ್ಟದ ಬಳಿ ಎಸೆದು ಪರಾರಿಯಾಗಿದ್ದರು. ಈ ಕೊಲೆ ಪ್ರಕರಣದ ಬಾಧಿತರಾದ ಲೋಹಿತ್ ದೊಡ್ಮನಿಯ ಮನೆಯವರೇ ಈ ಕೊಲೆ ಆರೋಪಿಗಳಾಗಿದ್ದು ಗಂಡ ಮತ್ತು ಮಕ್ಕಳಿಗೆ ತಿಳಿಯದಂತೆ ಗುಪ್ತವಾಗಿ ಈ ಕೊಲೆ ಷಡ್ಯಂತ್ರ ಮಾಡಿರುವ ಹಿನ್ನೆಲೆಯಲ್ಲಿ ಲೋಹಿತ್ ನ ಅಮ್ಮ, ಚಿಕ್ಕಮ್ಮ ಮತ್ತು ಅಣ್ಣನನ್ನು ಬಂಧಿಸಲಾಗಿದೆ. ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ತರುತ್ತಾಳೆ ಎನ್ನುವ ಶೀಲ ಸಂಬಂಧಿ ಆಕ್ಷೇಪದ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಈ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ಧೃಢಪಟ್ಟಿದೆ.
