ಸ್ನೇಹಿತ ಮಹೇಂದ್ರಕುಮಾರ್ ರ ಮಗಳು ಅಳಿಯ ಜೊತೆಗೆ ಈಗವರ ಪತ್ನಿ ಕೂಡಾ ಜರ್ಮನಿ ಸೇರಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡು ಛಾಯಾಚಿತ್ರ ತೆಗೆಯುತ್ತಿರುವ ಮಗ ಶೌರ್ಯಕೂಡಾ ವಿದೇಶಕ್ಕೆ ಹಾರುವ ಬಗ್ಗೆ ಹೇಳುತಿದ್ದರು. ಯಥಾ ಪ್ರಕಾರ ಮಹೇಂದ್ರ ಜೊಯಡಾದಿಂದ ಹುಣಸೂರುಗಳ ವರೆಗೆ ಕಾಡು ಮೇಡು ತಿರುಗುತ್ತಾ ಅವರ ಕಾ (ಡ)ಡುವ ಪ್ರೀತಿಯನ್ನು ಅರಸುತಿದ್ದಾರೆ. ಅಪರೂಪಕ್ಕೆ ಮಾತಿಗೆ, ಕೈಗೆ ಸಿಗುವ ಮಹೇಂದ್ರಕುಮಾರ ಇತ್ತೀಚೆಗೆ ಬಂದಿದ್ದಾಗ ಆರ್ಟಿಫಿಶಲ್ ಇಂಟಲಿಜೆನ್ಸ್ ನಲ್ಲಿ ಗೂಗಲ್ ಗಿಂತ ವಿಶಿಷ್ಟವಾಗಿ ಮಾಹಿತಿ ಹುಡುಕುವ ಬಗ್ಗೆ ಹೇಳಿದರು.
ಈ ಘಟನೆಯ ಆಸುಪಾಸಿನಲ್ಲೇ ಒರಿಸ್ಸಾದ ಲೀಸಾ ಸುದ್ದಿಮಾಡಿದ್ದಳು. ಏಐ ಯಾಂಕರ್ ಪಟಪಟಪಟನೆ ವರದಿ ವಾಚಿಸುವ ವೈಚಿತ್ರ ಸುದ್ದಿಯಾಗಿತ್ತು.
ಮೊದಮೊದಲು ಕಂಪ್ಯೂಟರ್ ಪರಿಚಯಿಸಲಾಗುತ್ತದೆ ಎನ್ನುತಿದ್ದಾಗ ಕಟ್ಟೆಮೇಲೆ ಬೀಡಿ-ಸಿಗರೇಟ್ ಸೇದುತ್ತಾ ಏನೋ ಹೊಸತನ್ನು ಕಲಿಯುತಿದ್ದೇವೆ! ಎನ್ನುವ ಹೊಂತುಗಾರರು ಆತಂಕಿತರಾಗಿ ಕಂಪ್ಯೂಟರ್ ಮನಷ್ಯನ ಉದ್ಯೋಗ ಕಸಿಯುತ್ತದೆ ಎಂದು ಊರೆಲ್ಲಾ ತಿರುಗಾಡಿ ಸಿದ್ದಿಮಾಡುತಿದ್ದುದು ನೆನಪಾಯಿತು. ವಾಸ್ತವದಲ್ಲಿ ಮಹಾಯುದ್ಧಗಳ ಜೊತೆಗಿನ ಉದ್ಯೋಗ ನಷ್ಟದ ಭೀತಿ ನನ್ನನ್ನು ಆವರಿಸಿದ್ದಂತೂ ಆವತ್ತೆ…..!?
ನಾನಾಗ ಬಹುಶ: ಕನ್ನಡ ಶಾಲೆಯ ಮೆಟ್ಟಿಲು ಹತ್ತಿದ್ದೆನೇನೋ? ಅದಾದ ಮೇಲೆ ಕಾರವಾರದ ಕಡಲಲ್ಲಿ ಬೃಹತ್ ಹಡಗೊಂದು ಸಿಕ್ಕಿಕೊಂಡ ಸುದ್ದಿ ನಮ್ಮೂರಿನ ಬುದ್ಧಿವಂತರ ಬಾಯಿಗೆ ರಸಗವಳ ವಾಗಿತ್ತು. ಈ ಬಗ್ಗೆ ಕೇಳಿ, ಕಾರವಾರಕ್ಕೇ ಹೋಗಿ ದೇವಬಾಗಿನ ತಿಮಿಂಗಿಲಗಳ ರೆಕ್ಕೆ ನೋಡಿ ಸಂಬ್ರಮಿಸಿದಂತೆ ಆ ಹಡಗಿನ ಕಳೆಬರಹದ ಬಗ್ಗೆ ಕೇಳಿದ್ದನ್ನು ನೋಡಲಾಗದೆ ಪರಿತಪಿಸಿದ ವಿನಾಕಾರಣ ಸಂಕಷ್ಟ ಈಗಲೂ ನನ್ನ ಮನಸ್ಸಿನಲ್ಲಿ ಒದ್ದೇಯಾಗೇ ಕೂತಿದೆ.
ಇದಾಗಿ ಹತ್ತು ವರ್ಷಗಳ ನಂತರ ಡಿ.ಟಿ.ಎಚ್. ತಂತ್ರಜ್ಞಾನದ ಬಗ್ಗೆ ಡಾ. ಬಾಲಸುಬ್ರಮಣ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದ ನಮಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸಿದಂತೆ ಆಪ್ತವಾಗಿ ಭೋದಿಸುತಿದ್ದರು. ಆಗಲೂ ನಮ್ಮಲ್ಲದೇ ತಲ್ಲಣ! ಮುಗಿಲಿನ ಪರದೆಗೆ ಕೇಬಲ್ ಸಿಕ್ಕಿಸಿ ಮೆನೆಮನೆಗೆ ವೈಯರ್ ಲೆಸ್ ಕೇಬಲ್ ಮೂಲಕ ಚಾನೆಲ್ ಗಳನ್ನು ಕೊಡುತ್ತಾರಂತೆ! ವ್ವಾ… ಎಂಥಾ ಕಲ್ಫನೆ, ಬಾಲು ಸರ್ ಗೆ ಬೇರೆ ಕೆಲಸ ಇಲ್ಲ, ನಮಗೆ ಬುದ್ಧಿ ಇಲ್ಲ ಎಂದು ಕವಿವಿ ಕ್ಯಾಂಟೀನ್ ನಲ್ಲಿ ಖಾಲಿ ಹೊಟ್ಟೆ, ಖಾಲಿ ಜೇಬಿನಲ್ಲಿ ನಕ್ಕು ಸುಖಿಸುತಿದ್ದೆವು. ಇವೆಲ್ಲಾ ಈಗ ಕಾಲ ಕಸ!
ಎಂಥಾ ಕಾಲ ಬಂತು, ಅದೇ ವೈಚಿತ್ರ್ಯಗಳ ಜಾತ್ರೆ ಮುಗಿಯದ ತೇರು! ಈಗ ಲೀಸಾ ಬಂದಳು. ಇನ್ನು ಸುಕನ್ಯಾ, ರಾಧಾ,ವಿಜಯಲಕ್ಷ್ಮಿ ಗಂಟಲುಹರಿದುಕೊಳ್ಳುವುದನ್ನು ಕೇಳುವ, ನೋಡುವ ಭಾಗ್ಯವಿಲ್ಲ. ನಮ್ಮ ಜಯಪ್ರಕಾಶ ಶೆಟ್ಟಿ, ರಂಗನಾಥ, ರಂಗಣ್ಣ, ಹಮೀದ್, ರೆಹಮಾನ್, ಶಶಿಧರ್ ಭಟ್ ಇವರೆಲ್ಲಾ ಕಳೆದುಹೋಗುತ್ತಾರೇನೋ ಅನ್ನೋ ಭಯ ಅದೇ ಲಾಗಾಯ್ತಿನ ನಿಷ್ಫ್ರಯೋಜಕ ಆತಂಕದ ಮೊಮ್ಮಗನ ತರಹದ್ದು !
ಏನೂ ಆಗಲ್ಲ…. ಸದ್ಯಕ್ಕೆ ಬೆಂಗಳೂರಿನ ಎಂಎನ್ಸಿ ducon ( ಎಐ ನಂಬಿ ತನ್ನ ಗ್ರಾಹಕ ವಿಭಾಗದ 90/ ನೌಕರರನ್ನು ಮನೆಗೆ ಕಳುಹಿಸಿದೆಯಂತೆ!
ಕಾಲವನ್ನು ತಡೆಯೋರು ಯಾರೂ ಇಲ್ಲ. ಅಂದಹಾಗೆ… ಕೃತಕ ಬುದ್ಧಿಮತ್ತೆ ಅಥವಾ ಸ್ವಯಂ ಅರಿವಿನ ಯಂತ್ರಗಳನ್ನುಮೊದಲು ಅನ್ವೇಶಿಸದವನು ಜಾನ್ ಮೆಕಾರ್ಥಿ ೧೯೫೬ ರಲ್ಲಿ… ಅಂದರೆ ಬಾಲ್ಯವಿವಾಹ,ಅಜಲು ಪದ್ಧತಿ, ಬೆತ್ತಲೆ ಸೇವೆ ನಿಷೇಧಿಸಿ ಕಾನೂ ಜಾರಿ ಮಾಡಿದಷ್ಟೇ ಹಳೆಯ ತಂತ್ರಜ್ಞಾನ ಈ ಎ.ಐ .ಅಥವಾ ಕೃತಕ ಬುದ್ಧಿಮತ್ತೆ!
ಓಎಮ್ಜಿ……….. ಇದಕ್ಕೆ ನಮ್ಮ ಆತಂಕೇಶ್ವರನಿಗಿಂತ ಹೆಚ್ಚು ವಯಸ್ಸು! ಮುಂದೆ ತಿಳಿದರಾಯಿತು ಬಿಡಿ, ಮಹಾಗುರು ತೇಜಸ್ವಿ ಹೇಳಿದ್ದಾರೆ… ಹಿಡಿಸಿದಷ್ಟು ಉಂಡಂತೆ ಅವಶ್ಯಕತೆಗೆ ಬೇಕಾಗುವಷ್ಟು ತಿಳಿದುಕೊಂಡು ಉಳಿದುದರ ಬಗ್ಗೆ ಮತ್ತದೇ ವಿಚಿತ್ರ ಕುತೂಹಲ,ಮೌಲ್ಯಯುತ ನಿರ್ಲಿಪ್ತತೆ ಯಿಂದ ಉಳಿದರಾಯಿತು…… – ನಿಮ್ಮ ಕನ್ನೇಶ್………