

ಬಿಜೆಪಿ-ಆರ್‌ಎಸ್‌ಎಸ್ ಕೇವಲ ಅಧಿಕಾರದ ಮೇಲೆ ಮಾತ್ರ ಆಸಕ್ತಿ ಹೊಂದಿದ್ದು, ಜನರ ದುಃಖ ಮತ್ತು ನೋವಿನ ಬಗ್ಗೆ ಕಾಳಜಿ ವಹಿಸದೆ ದೇಶವನ್ನು ವಿಭಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ನವದೆಹಲಿ: ಬಿಜೆಪಿ-ಆರ್‌ಎಸ್‌ಎಸ್ ಕೇವಲ ಅಧಿಕಾರದ ಮೇಲೆ ಮಾತ್ರ ಆಸಕ್ತಿ ಹೊಂದಿದ್ದು, ಜನರ ದುಃಖ ಮತ್ತು ನೋವಿನ ಬಗ್ಗೆ ಕಾಳಜಿ ವಹಿಸದೆ ದೇಶವನ್ನು ವಿಭಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಯೂತ್ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ-ಆರ್‌ಎಸ್‌ಎಸ್‌ಗೆ ಅಧಿಕಾರ ಮಾತ್ರ ಬೇಕು ಮತ್ತು ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಅಧಿಕಾರಕ್ಕಾಗಿ ಅವರು ಮಣಿಪುರವನ್ನು ಸುಡುತ್ತಾರೆ. ಅಷ್ಟೇ ಅಲ್ಲ, ಖುರ್ಚಿಗಾಗಿ ದೇಶವನ್ನು ಬೇಕಿದ್ದರೆ ಸುಡುತ್ತಾರೆ. ಅವರು ದೇಶದ ದುಃಖ ಮತ್ತು ನೋವಿನ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ’ ಎಂದು ಆರೋಪಿಸಿದ್ದಾರೆ.
ಅದು ಹರಿಯಾಣ, ಪಂಜಾಬ್ ಅಥವಾ ಉತ್ತರ ಪ್ರದೇಶವಾಗಿರಲಿ, ಅವರು ಕೇವಲ ಅಧಿಕಾರಕ್ಕಾಗಿ ಇಡೀ ದೇಶವನ್ನು ಮಾರಾಟ ಮಾಡುತ್ತಾರೆ ಎಂದು ಆರೋಪಿಸಿದ ರಾಹುಲ್, ಕಾಂಗ್ರೆಸ್‌ಗೆ ಇದು ಸವಾಲಿನ ಹೋರಾಟವಾಗಿದೆ ಎಂದು ಹೇಳಿದರು.
‘ಒಂದು ಕಡೆ, ನೀವು ಕುಳಿತುಕೊಂಡಿದ್ದೀರಿ ಮತ್ತು ನಿಮಗೆ ದೇಶದ ಮೇಲೆ ಪ್ರೀತಿ ಇದೆ ಮತ್ತು ದೇಶಕ್ಕೆ ನೋವುಂಟಾದಾಗ ಅಥವಾ ಅದರ ಪ್ರಜೆಗಳಿಗೆ ನೋವುಂಟಾದಾಗ, ನೀವು ಕೂಡ ನೊಂದುಕೊಳ್ಳುವಿರಿ ಮತ್ತು ದುಃಖಿತರಾಗುತ್ತೀರಿ. ಆದರೆ, ಅವರ ಹೃದಯದಲ್ಲಿ ಅಂತಹ ಯಾವುದೇ ಭಾವನೆಗಳಿಲ್ಲ. ಆರ್‌ಎಸ್‌ಎಸ್-ಬಿಜೆಪಿಯವರಿಗೆ ಅಂತಹ ಯಾವುದೇ ನೋವಿಲ್ಲ. ಏಕೆಂದರೆ, ಅವರು ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಾರೆ’ ಎಂದು ಅವರು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದರು.
ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯವರ ಭಾಷಣದ ಆಯ್ದ ಭಾಗಗಳನ್ನು ಹಂಚಿಕೊಂಡಿದೆ.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಜನಾಂಗೀಯ ಕಲಹ ಪೀಡಿತ ಮಣಿಪುರದ ಪರಿಸ್ಥಿತಿ ಕುರಿತು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕು ಮತ್ತು ಅದರ ನಂತರ ಆ ವಿಚಾರದ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆಯಾಗಬೇಕು ಎಂದು ಪಟ್ಟುಹಿಡಿದಿವೆ. (kpc)
