


ಸಿದ್ದಾಪುರ;
ತಾಲೂಕಿನ ವಡ್ಡಿನಗದ್ದೆಯಲ್ಲಿ ಸ್ಥಳೀಯ ಭಾರತಿ ಸಂಪದ,ಸಂಸ್ಕೃತಿ ಸಂಪದ,ಪ್ರಯೋಗ ಸ್ವಯಂ ಸೇವಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ದೇವದಾರು ಬನ ಪುನರ್ ಉತ್ಪತ್ತಿ ಹಾಗೂ ಮನೆಗೊಂದು ಹಣ್ಣಿನ ಗಿಡ ಕಾರ್ಯಕ್ರಮ ನಡೆಯಿತು.
ದೇವದಾರು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪ್ರವೀಣ ಕುಮಾರ ಬಸ್ರೂರು ಮಾತನಾಡಿ ನಾವು ವಿಜ್ಞಾನವೇ ಸತ್ಯ ಎಂದು ನಂಬುತ್ತಿದ್ದು ಇದಕ್ಕೂ ಮಿರಿದ ಅನುಭವವಿದ್ದು ಅದು ಪ್ರಕೃತಿ ವಿಜ್ಞಾನವಾಗಿದೆ. ನಮ್ಮ ಹಿರಿಯರು ಈ ಪ್ರಕೃತಿ ವಿಜ್ಞಾನವನ್ನು ಅರಿತಿದ್ದರು. ಪರಿಸರವನ್ನು ಉಳಿಸುವುದು ಇಲಾಖೆಯಲ್ಲಿರುವ ನಮ್ಮ ಕರ್ತವ್ಯವಾಗಿದೆ. ಆದರೆ ಗಣಪತಿ ಹೆಗಡೆಯಂತಹ ಪರಿಸರ ಪ್ರೇಮಿಗಳಿಗೆ ಇದು ಧರ್ಮವಾಗಿದೆ. ಸಸ್ಯಗಳಲ್ಲೂ ಸಂಘರ್ಷ ಇರುತ್ತವೆ. ಅವು ಮನುಷ್ಯರಂತೆ ವರ್ತಿಸುತ್ತವೆ. ಕಾರಣ ಗಿಡಮರಗಳು ನಮ್ಮಂತೆ ಪಂಚತತ್ವವನ್ನು ಹೊಂದಿರುತ್ತದೆ. ಪ್ರಕೃತಿ ಪೂಜೆ ನಮ್ಮ ಧರ್ಮವಾಗಿದೆ. ಇದಕ್ಕೆ ಕಾರಣ ಪ್ರಕೃತಿಯ ಮೂಲಕ ನಾವು ನಮ್ಮ ಒಳಗಿನ ತತ್ವವನ್ನು ಅರಿಯುತ್ತೇವೆ ಎಂದರು.

ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಮಾತನಾಡಿ ಮನುಷ್ಯ ಅಭಿವೃದ್ಧಿಯ ನೆಪ ಹೇಳಿ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಹಿಂದೆ ಪಶ್ಚಿಮ ಘಟ್ಟದಲ್ಲಿ ಹುಟ್ಟುವುದು ಪುಣ್ಯ ಮಾಡಿರುವವನು ಎನ್ನಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗೇ ಇಲ್ಲ. ಅನೇಕ ಸಸ್ಯ ಸಂಕುಲಗಳು ಕಣ್ಮರೆಯಾಗಿದೆ. ಇದನ್ನು ಉಳಿಸುವ ಕೆಲಸ ಮಾಡುವುದಕ್ಕೆ ವನಮಹೋತ್ಸವ ನಿತ್ಯೋತ್ಸವ ಆಗಬೇಕು ಎಂದರು.

ಪರಿಸರ ತಜ್ಞ ಎಂ.ಬಿ.ನಾಯ್ಕ, ಮಧುಮತಿ ಹೆಗಡೆ ,ಪಿ.ಬಿ.ಹೊಸೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಬಸವರಾಜ ಬುಚೊಳ್ಳಿ,ಆಡಿಆರ್‌ಎಪ್‌ಓ ಮಂಜುನಾಥ ಚನ್ನಣ್ಣನವರ್, ಫಾರೆಸ್ಟ್ ಮಂಜುನಾಥ,ಮುಂತಾದವರು ಉಪಸ್ಥಿತರಿದ್ದರು.
ಭಾರತಿ ಸಂಪದ ಸಂಸ್ಥೆಯ ಮುಖ್ಯಸ್ಥ ಗಣಪತಿ ಹೆಗಡೆ ವಡ್ಡಿನಗದ್ದೆಪ್ರಾಸ್ತಾವಿಕ ಮಾತನಾಡಿದರು. ಪ್ರಯೋಗ ಸ್ವಯಂಸೇವಾ ಸಂಸ್ಥೆ ಮುಖ್ಯಸ್ಥ ಗಂಗಾಧರ ಕೊಳಗಿ ಸ್ವಾಗತಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಹಲಗೇರಿ ಸಸ್ಯಪಾಲನಾ ವಾಚಮನ್ ಪರಮೇಶ್ವರ ಗೊಂಡರನ್ನು ಸನ್ಮಾನಿಸಲಾಯಿತು. (kpc)

