



ಸಿದ್ದಾಪುರ
ಭುವನಗಿರಿ,ಕಲ್ಲಾರೆಮನೆಯ ಸುಷಿರ ಸಂಗೀತ ಪರಿವಾರ ೯ನೇ ವರ್ಷದ ಸಂಯೋಜನೆಯಲ್ಲಿ ಗ್ರಾಮೀಣ ಕಲಾವಿದರು,ಸಾಧಕರ ಜೊತೆ ಸೇರಿ ಗ್ರಾಮಸ್ಥರ ಹರ್ಷೋತ್ಸವದ ಮೂಲಕ ವಿಭಿನ್ನವಾದ ಸ್ವಾತಂತ್ರ್ಯ ಸಂಭ್ರಮಾಚರಣೆಯನ್ನು ನಿಸರ್ಗದ ನಡುವಿನ ಭಾನ್ಕುಳಿ ಸನ್ಯಾಸಿಕೆರೆ ಬಳಿ ಆಯೋಜಿಸಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಮುಖ ಸಾಮಾಜಿಕ ಧುರೀಣ, ಶಿರಸಿಯ ರಾಜ್‌ದೀಪ್ ಟ್ರಸ್ಟ ಅಧ್ಯಕ್ಷ ದೀಪಕ್ ದೊಡ್ಡೂರು ಮಾತನಾಡಿ ನಿರಂತರ ೯ ವರ್ಷಗಳಿಂದ ಸುಷಿರ ಸಂಗೀತ ಪರಿವಾರ ಆಯೋಜಿಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ ವಿಭಿನ್ನವಾದದ್ದು, ಮತ್ತು ನಮ್ಮ ರಾಷ್ಟ್ರಕ್ಕೇ ಮಾದರಿಯಾದದ್ದು. ನಮ್ಮಲ್ಲಿ ರಾಷ್ಟ್ರ ಪ್ರೇಮ ಜಾಗೃತಗೊಳಿಸುವದರ ಜೊತೆಗೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದೆ. ಸಾಮಾಜಿಕವಾಗಿ, ಗ್ರಾಮೀಣ ಭಾಗದ ಸುಸ್ಥಿರತೆಗಾಗಿ,ಮುಖ್ಯವಾಗಿ ಸಂಗೀತ ಕ್ಷೇತ್ರದಲ್ಲಿ ಮಹತ್ವಪೂರ್ಣ ಕಾರ್ಯಗಳನ್ನು ಮಾಡುತ್ತಿರುವ ಸುಷಿರ ಸಂಗೀತ ಪರಿವಾರ ಇನ್ನಷ್ಟು ಕ್ರೀಯಾತ್ಮಕವಾಗಿ ಕಾರ್ಯನಿರ್ವಹಿಸಲಿ ಎಂದರು.

ಮುಖ್ಯ ಅಭ್ಯಾಗರಾಗಿ ಪಾಲ್ಗೊಂಡು ಮಾತನಾಡಿದ ಶಿರಸಿ ಟಿ.ಎಸ್.ಎಸ್. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಎ.ಹೆಗಡೆ ಸ್ವಾಭಿಮಾನದ,ದೇಶಪ್ರೇಮದ ಕೊರತೆ ನಮ್ಮಲ್ಲಿ ಸಾಕಷ್ಟಿದೆ. ಸ್ವಾತಂತ್ರ್ಯ ದ ನಿಜ ಅರ್ಥವನ್ನು ನಾವು ತಿಳಿದಿಲ್ಲ. ನಮಗೆ ಆರ್ಥಿಕ ಸಬಲತೆ ಮುಖ್ಯ.ಹಳ್ಳಿಗಾಡಿನ ಕರಕುಶಲತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ.ದೇಸಿ ಸಂಪನ್ಮೂಲಗಳನ್ನು ಬಳಸಿ ರೂಪಿಸುವ ವಸ್ತುಗಳು ಪ್ರಪಂಚಕ್ಕೆ ಪರಿಚಯವಾದಾಗ ಯುವಕರಿಗೆ ಕೃಷಿಯ ಕುರಿತು ಆಸಕ್ತಿ ಹೆಚ್ಚುತ್ತದೆ. ಇಂಥ ಸಹೃದಯಿ ಕಾರ್ಯಕ್ರಮ ಅಪರೂಪದ್ದು ಎಂದರು.

ಇನ್ನೊರ್ವ ಅತಿಥಿ ಭುವನೇಶ್ವರಿ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಸ್ವಸ್ಥ ಭಾರತ ಪರಿಕಲ್ಪನೆ ಮಹತ್ವಪೂರ್ಣವಾದದ್ದು. ಹಣಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ,ಪತ್ರಕರ್ತ ಗಂಗಾಧರ ಕೊಳಗಿ ದೇಶಭಕ್ತಿ ಎನ್ನುವದು ಪ್ಯಾಷನ್ ಆಗಿರುವ,ಪ್ರದರ್ಶನವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಲವು ಊರುಗಳ ಸಹೃದಯರು ಒಂದಾಗಿ, ವಿನೂತನ ರೀತಿಯಲ್ಲಿ ದೇಶಕ್ಕೆ ಗೌರವಸಲ್ಲಿಸಿ,ಸಂಭ್ರಮಿಸುತ್ತಿರುವ ಇಂಥ ಕಾರ್ಯಕ್ರಮಗಳು ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಭಾರದ್ವಾಜ ಶಾಸ್ತ್ರಿ ,ಭಾಸ್ಕರ ಹೆಗಡೆ ಗಮನಿ, ಸ್ವರಗಂಗಾ ಸಂಗೀತ ತರಬೇತಿ ತಂಡದ ಸದಸ್ಯೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಸುಷಿರ ಸಂಗೀತ ಪರಿವಾರದ ಮುಖ್ಯಸ್ಥ ನಾರಾಯಣ ಹೆಗಡೆ ಕಲ್ಲಾರೆಮನೆ ವಂದಿಸಿದರು.

