ಸಿದ್ದಾಪುರ: ಸಮಾಜದ ಲೋಪ ದೋಷಗಳನ್ನು ಬಿಂಬಿಸಿ ಸಮಾಜವನ್ನು ಸನ್ನಡೆತೆಯತ್ತ ಕೊಂಡೊಯ್ಯಲು ನಾಟಕಗಳು ಸಹಕಾರಿ ಎಂದು ಹಿರಿಯ ವಕೀಲರಾದ ಎ ಪಿ ಭಟ್ಟ ಮುತ್ತಿಗೆ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗಸೌಗಂಧದ ರಂಗ ಸಂಚಾರ 23-24 ರ ಅಡಿಯಲ್ಲಿ ಹಮ್ಮಿಕೊಂಡ 36 ಅಲ್ಲ 63 ಎಂಬ ಹವಿಗನ್ನಡ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದ ಅಥಿತಿಗಳಾಗಿ ಅವರು ಮಾತನಾಡಿದರು.
ಹಿಂದಿನ ಜೀವನದ ಪದ್ಧತಿ, ಸಂಸ್ಕೃತಿಯನ್ನು ಅರಿಯಲು ಇಂದಿನ ಯುವಜನತೆ ನಾಟಕಗಳನ್ನು ನೋಡುವುದು ಅತ್ಯವಶ್ಯ. ಈ ದಿಶೆಯಲ್ಲಿ ರಂಗಸೌಗಂಧದ ಕಾರ್ಯ ಶ್ಲಾಘನೀಯ ಎಂದರು.
ಅಥಿತಿಗಳಾಗಿ ಭಾಗಿಯಾದ ಇಟಗಿ ರಾಮೇಶ್ವರ ದೇವಾಲಯದ ಮೊಕ್ತೇಸರ ಚಂದ್ರಶೇಖರ ಹೆಗಡೆ ಮತ್ತು ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೀಕಾಂತ ಹೆಗಡೆ ಗುಂಜಗೋಡು ಮಾತನಾಡಿದರು.
ನಂತರ ಎನ್ ಎಸ್ ರಾವ್ ಮೂಲರಚನೆಯ, ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ 36 ಅಲ್ಲ 63 ಎಂಬ ಹವಿಗನ್ನಡ ನಾಟಕ ಪ್ರದರ್ಶನಗೊಂಡಿತು.
ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡು ನಿರೂಪಿಸಿದರು. ರಾಮು ಅಂಕೋಲೆಕರ್ ವಂದಿಸಿದರು.