

ತಾಳಗುಪ್ಪಕ್ಕೆ ರೈಲು ಸಂಚಾರ ನಿಂತು ಕೇವಲ ಡಬಲ್ ಡೆಕ್ಕರ್ ನಂತಹ ಎರಡು ಭೋಗಿಗಳು ಮಾತ್ರ ಹೊಂದಿದ್ದ ರೈಲು ಟಿಲ್ಲರ್ ನಷ್ಟು ವೇಗದಲ್ಲಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಿತ್ತು. ಇದರಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಎಂಬ ಬಯಕೆ ಈಡೇರುವುದರ ಒಳಗೆ ಅದು ನಿಂತು ಹೋಯಿತು. ನಂತರ ಶಿವಮೊಗ್ಗವೇ ಕೊನೆಯ ನಿಲ್ದಾಣವಾಯಿತು. ಶಿವಮೊಗ್ಗದಿಂದ ಬೆಂಗಳೂರು, ಮೈಸೂರಿಗೆ, ಬೆಂಗಳೂರು, ಮೈಸೂರಿನಿಂದ ಶಿವಮೊಗ್ಗದವರೆಗೆ ಮಾತ್ರ ರೈಲಿತ್ತು. ಹಿರಿಯ ಸಾಹಿತಿಗಳಾದ ನಾ.ಡಿಸೋಜ, ವಿಲಿಯಂ ಮುಂತಾದವರ ರೈಲ್ವೆ ಇಲಾಖೆಯೊಂದಿಗಿನ ಹೋರಾಟದಲ್ಲಿ ಮತ್ತೆ ತಾಳಗುಪ್ಪದವರೆಗೆ ರೈಲುಗಳು ಹೋಗಿ ಬರಲು ಆರಂಭವಾಯಿತು. ಇದರಿಂದ ಈ ಭಾಗದ ಜನರಿಗೆ ಖುಷಿಯಾದರೂ ಒಂದು ಕೊರಗಿತ್ತು. ಅದೇನೆಂದರೆ ಶಿವಮೊಗ್ಗ ಮತ್ತು ತಾಳಗುಪ್ಪ ನಡುವೆ ಬ್ರಿಟಿಷರ ಕಾಲದಲ್ಲೂ ಇದ್ದ ಕೆಲವು ನಿಲ್ದಾಣಗಳಲ್ಲಿನ ರೈಲು ನಿಲುಗಡೆ ಹೊಸದಾಗಿ ರೈಲು ಆರಂಭವಾದಾಗ ಇರಲಿಲ್ಲ. ಅದರಲ್ಲಿ ಮುಖ್ಯವಾಗಿದ್ದು ರಿಪ್ಪನ್ ಪೇಟೆ ಸಮೀಪದ ಅರಸಾಳು ರೈಲ್ವೇ ಸ್ಟೇಷನ್.
‘ಅರಸಾಳು’ ಎಂಬ ಈ ಊರಿಗೂ ಕನ್ನಡಮೂಲದ ಇಂಗ್ಲಿಷ್ ಲೇಖಕ ಕೆ.ಆರ್.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ಕೃತಿಯನ್ನಾಧರಿಸಿ ಕನ್ನಡ ಚಲನಚಿತ್ರನಟ ನಿರ್ದೇಶಕ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ ಅದೇ ಹೆಸರಿನ ಟಿವಿ ಧಾರವಾಹಿಗೂ ಸಂಬಂಧವಿದೆ. ನಾರಾಯಣ್ ಕಲ್ಪನೆಯ ಮಾಲ್ಗುಡಿ, ಕಲಾವಿದ ಜಾನ್ ದೇವರಾಜ್ ಅವರ ಕಲೆಯ ಕುಸುರಿಯಲ್ಲಿ ಅರಸಾಳು ರೈಲ್ವೇ ನಿಲ್ದಾಣದಲ್ಲಿ ಮೂರ್ತರೂಪ ಪಡೆದಿದೆ. ಈ ಪ್ರಯತ್ನದ ಹಿಂದೆ ಸಂಸದ ಬಿ.ವೈ ರಾಘವೇಂದ್ರ ಅವರ ದೊಡ್ಡ ಪಾತ್ರವಿದೆ. ಅರಸಾಳು ರೈಲ್ವೇ ನಿಲ್ದಾಣಕ್ಕೆ ‘ಮಾಲ್ಗುಡಿ ರೈಲ್ವೆ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕೆಂಬ ಸಲಹೆಯಿದ್ದರೂ ಅದಕ್ಕೆ ಸ್ಥಳೀಯರ ವಿರೋಧವಿದೆ. ಸದ್ಯ ಇದು ‘ಅರಸಾಳು ರೈಲ್ವೆ ನಿಲ್ದಾಣ’ವಾಗಿಯೇ ಮುಂದುವರೆದಿದೆ.
ತಾಳಗುಪ್ಪಕ್ಕೆ ಅರಸಾಳು ಮೂಲಕ ರೈಲು ಸಂಚರಿಸುವುದು ಆರಂಭವಾದರೂ ಇಲ್ಲಿ ನಿಲುಗಡೆ ಕೊಡುತ್ತಿಲ್ಲ. ಇಲ್ಲಿ ನಿಲುಗಡೆ ಕೊಡಬೇಕು ಎಂದು ಹೋರಾಟಗಾರ ರಿಪ್ಪನ್ ಪೇಟೆಯ ಟಿ.ಆರ್.ಕೃಷ್ಣಪ್ಪ ಹಲವು ಹೋರಾಟಗಳನ್ನು ನಡೆಸಿದ್ದರು. ರೈಲಿಗೆ ತಡೆ ಒಡ್ಡಿದ್ದರು. ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿದ್ದರು. ಆದರೆ ಯಾವುದೂ ಫಲ ಕೊಟ್ಟಿರಲಿಲ್ಲ. ತಿಂಗಳ ಹಿಂದೆ ಅವರಿಗೆ ಯೋಚನೆಯೊಂದು ಬಂದಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳು ತುಂಬ ಜಾಗರೂಕರಾಗಿರುತ್ತಾರೆ ಎಂದು ಮನಸ್ಸಿಗೆ ಬಂದ ತಕ್ಷಣ ಕೃಷ್ಣಪ್ಪನವರು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಫೋನ್ ಮಾಡಿದ್ದಾರೆ. ಅವರು ಸ್ವೀಕರಿಸಿಲ್ಲ. ಅವರ ಆಪ್ತ ಕಾರ್ಯದರ್ಶಿಗಳಿಗೆ ಫೋನ್ ಮಾಡಿದ್ದಾರೆ. ಸಂಸದರಿಗೆ ಸಂಪರ್ಕ ಕೊಡಲು ವಿನಂತಿಸಿದ್ದಾರೆ. ಅದು ಸಾಧ್ಯವಾಗಿಲ್ಲ. ಮತ್ತೆ ಆಪ್ತ ಕಾರ್ಯದರ್ಶಿಗಳಿಗೆ ಫೋನ್ ಮಾಡಿ ಅರಸಾಳುವಿನಲ್ಲಿ ರೈಲು ನಿಲುಗಡೆ ಕೊಡದಿದ್ದರೆ ತಾನು ಕೇಂದ್ರ ಸರ್ಕಾರದ ಬೇಜವಾಬ್ದಾರಿಯ ಬಗ್ಗೆ ದಿನನಿತ್ಯ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಹುಷಃ ಇದು ಸಂಸದರ ಗಮನ ಸೆಳೆದಿರಬೇಕು. ಅವರು ತಕ್ಷಣ ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆದು ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಕೊಡಲು ವಿನಂತಿಸಿದ್ದಾರೆ. ರೈಲ್ವೆ ಇಲಾಖೆ ಅನುಮತಿ ನೀಡಿದೆ.
ಮೊನ್ನೆ ಅರಸಾಳು ಮತ್ತು ಕುಂಸಿಯಲ್ಲಿ ರೈಲು ನಿಲುಗಡೆ ಕೊಡಲು ಅನುಮತಿ ಸಿಕ್ಕ ಬಗ್ಗೆ ಜನ ವಿಜಯೋತ್ಸವ ಆಚರಿಸಿದ್ದಾರೆ. ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೃಷ್ಣಪ್ಪ ಅನಾಮಿಕರಾಗಿಯೇ ಉಳಿದಿದ್ದಾರೆ. ಆ ಕಾರಣಕ್ಕೆ ಈ ಟಿಪ್ಪಣಿ ಬರೆಯಬೇಕಾಯಿತು! (sarjashankar harlimath)
