ಸ್ವಾಮಿ ವಿವೇಕಾನಂದರೇ ಮನೋರೋಗಿಗಳ ಆಸ್ಫತ್ರೆ ಎಂದು ಕೈ ಚೆಲ್ಲಿದ್ದ ಕೇರಳ, ಮಹಾತ್ಮಾಗಾಂಧೀಜಿಯವರಿಗೆ ಅಸ್ಪೃಶ್ಯತೆಯ ತಿಳುವಳಿಕೆ ಮೂಡಿಸಿದ ಕೇರಳ ಜಗತ್ತಿನ ಭೂಪಟದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದು ಬ್ರಹ್ಮಶ್ರೀ ನಾರಾಯಣಗುರುಗಳ ಸಾಧನೆ ಎಂದು ಬಣ್ಣಿಸಿದ ಪತ್ರಕರ್ತ ಕೋಲಶಿರಸಿ ಕನ್ನೇಶ್ ನಾರಾಯಣ ಗುರು ವಿಶ್ವಕ್ಕೇ ದಾರಿ ತೋರಿದ ದಾರ್ಶನಿಕ ಎಂದರು.
ಹೊನ್ನಾವರದ ನಾಮಧಾರಿ ವಿದ್ಯಾರ್ಥಿ ಸಭಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಕೇರಳ ಒಂದು ದಿನದಲ್ಲಿ ನಿರ್ಮಾಣವಾದ್ದಲ್ಲ ದೇವಾಲಯ ಪ್ರವೇಶ, ಶಾಲಾ ಪ್ರವೇಶಕ್ಕೆ ಅಡ್ಡಿ ಮಾಡಿದ್ದ ಪುರೋಹಿತಶಾಹಿಗಳ ವಿರುದ್ಧ ರಕ್ತರಹಿತ ಕ್ರಾಂತಿ ಮಾಡಿ ಕೇರಳವನ್ನು ಭಾರತದ ಅಭಿವೃದ್ಧಿ ಹೊಂದಿದ ರಾಜ್ಯ ಮಾಡಿದ ನಾರಾಯಣ ಗುರುಗಳ ವಿಶ್ವಮಾನವತ್ವದ ತತ್ವ, ಸಿದ್ಧಾಂತ,ಸಾಧನೆಗಳು ಈಗಲೂ ಮಾರ್ಗದರ್ಶಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ ನಾನೂ ಕೂಡಾ ನಾರಾಯಣ ಗುರುಗಳ ಮಾರ್ಗದರ್ಶನದಿಂದಲೇ ನಾಯಕನಾದವನು ಎಂದರು.
ಕಾರ್ಯಕ್ರಮದ ಸಂಯೋಜಕ ಸಂಘಟನೆಗಳಾದ ಈಡಿಗ ರಾಷ್ಟ್ರೀಯ ಮಹಾಮಂಡಳಿ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ, ಬಿ.ಎಸ್.ಎನ್ಡಿ.ಪಿ. ತಾಲೂಕಾಧ್ಯಕ್ಷ ಧನಂಜಯ ನಾಯ್ಕ ಸೇರಿದಂತೆ ಕೆಲವರು ಮಾತನಾಡಿದರು.
ಪ್ರಾಸ್ಥಾವಿಕ ಭಾಷಣ ಮಾಡಿದ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ಅಸ್ಪೃಶ್ಯತೆ,ಶೋಷಣೆ ವಿರುದ್ಧ ಹೋರಾಡಿ ಸಮಾಜ ಸುಧಾರಣೆ ಮಾಡಿದ ನಾರಾಯಣ ಗುರು ದೇಶಕ್ಕೇ ಬೆಳಕು ನೀಡಿದ ಸಂತ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಮಂಕಾಳು ವೈದ್ಯ ಮತ್ತು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ರನ್ನು ಈಡಿಗ ರಾಷ್ಟ್ರೀಯ ಮಹಾ ಮಂಡಳಿ ಪರವಾಗಿ ಅಭಿನಂದಿಸಲಾಯಿತು. ತಾಲೂಕಾ ಬಿ.ಎಸ್. ಎನ್.ಡಿ.ಪಿ. ಪರವಾಗಿ ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.