ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಾಗುವವರಲ್ಲಿ ಕೆಲವರು ಹಿಂದೇಟು ಹಾಕುತಿದ್ದರೆ ಕೆಲವರು ಈಗಾಗಲೇ ಬಿಳಿ ವಸ್ತ್ರ ತಯಾರಿಸಿಕೊಂಡು ಸಿದ್ಧರಾಗಿದ್ದಾರೆ ಎನ್ನುವ ವರ್ತಮಾನಗಳಿವೆ. ಸತತ ನಾಲ್ಕುಬಾರಿ ಉತ್ತರ ಕನ್ನಡ ಸಂಸದರಾಗಿದ್ದ ಅನಂತಕುಮಾರ ಹೆಗಡೆ ತಮ್ಮ ಆರೋಗ್ಯ ಸಮಸ್ಯೆ ಮತ್ತು ಪಕ್ಷದೊಂದಿಗಿನ ವಿರಸಗಳ ಹಿನ್ನೆಲೆಯಲ್ಲಿ ಸ್ವಯಂ ವಿವೃತ್ತಿ ಗೋಶಿಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಟಿಕೇಟ್ ನೀಡಲು ಸಿದ್ದವಾಗಿರುವ ಭೀಮಣ್ಣ ನಾಯ್ಕ,ಪ್ರಶಾಂತ್ ದೇಶಪಾಂಡೆ, ಸತೀಶ್ ಶೈಲ್ ಗಳೆಲ್ಲಾ ನಮಗೆ ಬೇಡ ಲೋಕಸಭೆಯ ಚುನಾವಣೆಯ ಉಸಾಪರಿ ಎನ್ನತೊಡಗಿದ್ದಾರಂತೆ!
ಶಿರಸಿಯ ಅನಂತಮೂರ್ತಿ ಹೆಗಡೆ ಕಳೆದ ಎರಡ್ಮೂರು ತಿಂಗಳಿಂದ ಸಮಾಜಸೇವೆ ಮಾಡುತ್ತಾ ತಾನೂ ಲೋಕಸಭೆಯ ಉತ್ತರ ಕನ್ನಡ ಅಭ್ಯರ್ಥಿ ಎನ್ನತೊಡಗಿದ್ದಾರಂತೆ! ಇವರಿಗೆ ಸದ್ಯ ಯಾವ ಪಕ್ಷವೂ ಸಿಗದಿರುವುದೂ ವಿಶೇಶವೆ!
ಈ ನಡುವೆ ಕಾಂಗ್ರೆಸ್ ನಿಂದ ಟಿಕೇಟ್ ಪಡೆಯಬಹುದಾದ ಅವಕಾಶವಿದ್ದರೂ ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಬಿ.ಜೆ.ಪಿ. ಸೇರಿರುವ ಸಿದ್ಧಾಪುರದ ಶಶಿಭೂಷಣ ಹೆಗಡೆ ಅತ್ತ ಬಿ.ಜೆ.ಪಿಯ ಭರವಸೆಯೂ ಇಲ್ಲದೆ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಮತ್ತು ಪತ್ರಕರ್ತ ಕೋಣೆಮನೆ ಹರಿಪ್ರಕಾಶ ವಿರುದ್ಧ ಗೊಣಗುತಿದ್ದರೆ….. ಇದೇ ವಿಚಾರದಲ್ಲಿ ಶಶಿಭೂಷಣರ ನೆಂಟ ಪತ್ರಕರ್ತ ವಿಶ್ವೇಶ್ವರ ಭಟ್ ಸೋತ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಬುಸುಗುಡುತಿದ್ದಾರೆ ಎನ್ನುವ ವರ್ತಮಾನವಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದಿಂದ ಜಾದಳದಿಂದ ಕೂದಲೆಳೆ ಅಂತರದಲ್ಲಿ ಸೋತ ಸೂರಜ್ ನಾಯ್ಕ ಸೋನಿಯವರನ್ನು ಕರೆತಂದು ಕಾಂಗ್ರೆಸ್ ಮೂಲಕ ಇಂಡಿಯಾ ಅಭ್ಯರ್ಥಿ ಮಾಡಬಹುದು ಎನ್ನುವ ಗುಲ್ಲೆದ್ದಿದೆ. ಇದೇ ಸಮಯದಲ್ಲೇ ಎನ್.ಡಿ.ಎ. ಭಾಗವಾಗಲು ಕಾಯುತ್ತಿರುವ ಜೆ.ಡಿ.ಎಸ್. ಸೂರಜ್ ರಿಗೆ ದುಡುಕಬೇಡಿ ನೀವೇ ನಮ್ಮ ಎನ್.ಡಿ.ಎ. ಕ್ಯಾಂಡಿಡೇಟ್ ಎನ್ನುತ್ತಿದೆಯಂತೆ! ಈ ವರ್ತಮಾನಗಳ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ನಂ೧ ಮತದಾರರಾದ ಮರಾಠಾ ಭಾಷಿಗರಲ್ಲಿ ಸತೀಶ್ ಶೈಲ್ ಇಂಡಿಯಾದ ಅಭ್ಯರ್ಥಿಯಾದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಶಿಸಲಾಗುತ್ತಿದೆ.
ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪಕ್ಷಗಳೆರಡೂ ತಮ್ಮ ಅಭ್ಯರ್ಥಿಗಳಾಗಿ ದೀವರು, ನಾಮಧಾರಿಗಳೆನ್ನುವ ಹಳೆಪೈಕ ಈಡಿಗರಾದರೆ ಸುಲಭ ಗೆಲುವು ಸಾಧಿಸಬಹುದೆಂದು ಲೆಕ್ಕಾಚಾರ ಹಾಕುತಿದ್ದು ಬಿ.ಜೆ.ಪಿ. ಮೂಲಕ ಎನ್.ಡಿ.ಎ. ಅಭ್ಯರ್ಥಿಗಳನ್ನಾಗಿ ಮಾಡಲು ಸೂರಜ್ ಸೋನಿ, ಸುನಿಲ್ ನಾಯ್ಕ ಭಟ್ಕಳ ಹಾಗೂ ಸಿದ್ಧಾಪುರದ ಕೆ.ಜಿ.ನಾಯ್ಕರತ್ತ ಗಮನಹರಿಸುತಿದ್ದಾರೆ ಎನ್ನುವ ವರ್ತಮಾನಗಳಿವೆ.
ಬಿ.ಜೆ.ಪಿಯಿಂದ ನಾಮಧಾರಿಗಳಿಗೆ ಟಿಕೇಟ್ ನೀಡದ ಸಂದರ್ಭದಲ್ಲಿ ಬಿ.ಜೆ.ಪಿ. ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಶಶಿಭೂಷಣ ಹೆಗಡೆಯವರನ್ನು ಪರಿಗಣಿಸಬಹುದು ಎನ್ನುವ ಯೋಚನೆಯಲ್ಲಿದೆ ಎನ್ನುವ ವರ್ತಮಾನವಿದೆ. ಈ ವಿದ್ಯಮಾನಗಳನ್ನು ಅರಿತಿರುವ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಕಾಂಗ್ರೆಸ್, ಬಿ.ಜೆ.ಪಿ. ಎನ್.ಡಿ.ಎ. ಇಂಡಿಯಾ ಎಲ್ಲಿಂದಲಾದರೂ ತಮ್ಮ ಪುತ್ರ ವಿವೇಕ್ ಹೆಬ್ಬಾರ್ ರನ್ನು ಲೋಕಸಭೆಗೆ ಕಳಿಸಲೇಬೇಕು ಎಂದು ಪಣ ತೊಟ್ಟಿದ್ದಾರಂತೆ ಹಾಗಾಗಿ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಪುತ್ರನನ್ನು ಎನ್.ಡಿ.ಎ. ಅಭ್ಯರ್ಥಿಮಾಡಲು ಬಿ.ಜೆ.ಪಿ ಯೊಂದಿಗೆ ಗುದ್ದಾಟ ಪ್ರಾರಂಭಿಸಿದ್ದು ವಿವೇಕ್ ಹೆಬ್ಬಾರ್ ಗೆ ಬಿ.ಜೆ.ಪಿ.ಯ ಉತ್ತರ ಕನ್ನಡ ಟಿಕೇಟ್ ಖಚಿತಪಡಿಸದಿದ್ದರೆ ನಾನು ಕಾಂಗ್ರೆಸ್ ಕಡೆ ಹೊರಟೆ ಎನ್ನುವ ಹಾವು ಬಿಟ್ಟಿದ್ದಾರಂತೆ!
ಇತ್ತ ಕಾಂಗ್ರೆಸ್ ನಲ್ಲೂ ಶಿವರಾಮ ಹೆಬ್ಬಾರ್ ಸೇರ್ಪಡೆಗೆ ವಿರೋಧ ವ್ಯಕ್ತವಾಗುತಿದ್ದು ಕಾಂಗ್ರೆಸ್ ನಲ್ಲಿ ಉತ್ತರ ಕನ್ನಡ ಲೋಕಸಭೆ ಅಭ್ಯರ್ಥಿ ಘೋಶಿಸದೆ ಶಿವರಾಮ ಹೆಬ್ಬಾರ್ ನಡೆ ನೋಡಿ ವಿವೇಕ್ ಹೆಬ್ಬಾರ್ ರಿಗೆ ಯಲ್ಲಾಪುರ ಉಪಚುನಾವಣೆಯ ಟಿಕೇಟ್ ಅಥವಾ ಉತ್ತರ ಕನ್ನಡ ಲೋಕಸಭೆ ಟಿಕೇಟ್ ನೀಡಿ ಶಿವರಾಮ್ ಹೆಬ್ಬಾರ್ ಕರೆತಂದರೆ ಒಂದೇ ಕಲ್ಲಿಗೆ ಮೂರು ಹಕ್ಕಿ ಉರುಳಿಸಬಹುದು ಎನ್ನುವ ಲೆಕ್ಕಾಚಾರ ಇನ್ನೂ ಚರ್ಚೆಯ ಹಂತವನ್ನೇ ಮುಗಿಸುತ್ತಿಲ್ಲ. ಒಟ್ಟಾರೆಶಿವರಾಮ್ ಹೆಬ್ಬಾರ್ ಪುತ್ರ ಬಿ.ಜೆ.ಪಿ.ಯಿಂದ ಲೋಕಸಭೆ ಅಭ್ಯರ್ಥಿಯಾದರೆ ಕನಿಷ್ಟ ಆರೆಂಟು ಜನ ಆಕಾಂಕ್ಷಿಗಳು ಬಿ.ಜೆ.ಪಿ. ಯಿಂದ ಹಾಗೂ ಕನಿಷ್ಠನಾಲ್ಕೈದು ಅಭ್ಯರ್ಥಿಗಳು ಜಾದಳ, ಕಾಂಗ್ರೆಸ್ ಗಳಿಂದ ಕಂಗಾಲಾಗುವ ಸರದಿಯಲ್ಲಿದ್ದಾರೆ.
ಇಡೀ ಕುರುಕ್ಷೇತ್ರದ ಹಣೆ ಬರಹ ಬರೆಯಬಲ್ಲ ಮಂಕಾಳಯ ವೈದ್ಯ, ದೇಶಪಾಂಡೆ,ಭೀಮಣ್ಣ ನಾಯ್ಕರ ತೀರ್ಮಾನಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎನ್ನುವುದು ೨೫ ವರ್ಷ ಜಿಲ್ಲೆ ಆಳಿದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆಯವರ ವಿಫಲತೆಯ ಫಲ ಎನ್ನಲಾಗುತ್ತಿದೆ.
ಈ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿರುವ ಶಿರಸಿಯ ಎ.ರವೀಂದ್ರ ಮಾತ್ರ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಕಾಂಗ್ರೆಸ್ ಅವಕಾಶ ನೀಡಿದರೆ ನಾನೂ ಒಂದ್ ಕೈ ನೋಡೇ ಬಿಡುತ್ತೇನೆ ಎಂದು ಆತ್ಮವಿಶ್ವಾಸದ ಮಾತನಾಡುತಿದ್ದಾರೆ. ಆದರೆ ಉತ್ತರ ಕನ್ನಡ ರಾಜಕಾರಣ ಈಗ ದೇಶಪಾಂಡೆ, ಹೆಗಡೆದ್ವಯರು, ಮಂಕಾಳ್ ವೈದ್ಯರನ್ನೂ ಹಿಂದೆ ಬಿಟ್ಟು ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ರತ್ತ ಸಾಗುತ್ತಿರುವುದರಿಂದ ಈ ವರ್ಷದ ಕೊನೆಯ ಒಳಗೆ ಹೆಚ್ಚಿನ ಬದಲಾವಣೆ ನಿರೀಕ್ಷಿಸಬಹುದು……