



ಸಿದ್ದಾಪುರ: ರೈತರ ಜೀವನಾಡಿಯಾಗಿರುವ ಸಹಕಾರಿ ಸಂಘಗಳು ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಸದಸ್ಯರ ಆಧಾರಸ್ತಂಬವಾಗಿ ಕೆಲಸ ಮಾಡುತ್ತಿವೆ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ, ಸಿಮೆಂಟ್ ಹಾಗೂ ಕಬ್ಬಿಣದ ವ್ಯಾಪಾರ ಮಳಿಗೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘದ ಅಭಿವೃದ್ಧಿಯಾಗಬೇಕಾದರೆ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಇರಬೇಕು. ಬೇಡ್ಕಣಿ ಸೊಸೈಟಿ ಆ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದಲೇ ಲಾಭ ಗಳಿಸಲು ಸಾಧ್ಯವಾಗಿದೆ. ಇದೇ ರೀತಿಯ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಮುಂದುವರೆಸಿ ಸಂಘವನ್ನು ಉತ್ತುಂಗಕ್ಕೆ ಕೊಂಡೊಯ್ದು ಸದಸ್ಯರ ಹಿತ ಕಾಪಾಡಿ ಎಂದ ಅವರು, ರೈತಾಪಿ ಸಮುದಾಯ ನೆಮ್ಮದಿಯ ಬದುಕು ನಡೆಸಲು ಸಮರ್ಪಕ ಮಳೆಯಾಗಲಿ ಎಂದು ಎಲ್ಲರು ಪ್ರಾರ್ಥಿಸೋಣ ಎಂದರು.

ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿ, 1965-66 ರಲ್ಲಿ ಸ್ಥಾಪನೆಯಾದ ಸಂಘ ಸಾಕಷ್ಟು ಏರುಪೇರುಗಳ ನಡುವೆ ಬೆಳೆದು ಬಂದ ಇದೀಗ 46 ವರ್ಷ ಪೂರೈಸಿದ್ದು, ಸದಸ್ಯರ ಅನುಕೂಲಕ್ಕಾಗಿ ಸಿಮೆಂಟ್ ಹಾಗೂ ಕಬ್ಬಿಣದ ವ್ಯಾಪಾರ ಮಳಿಗೆ ಪ್ರಾರಂಭಿಸಲಾಗಿದೆ ಎಂದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ, ಸಹಕಾರಿ ಕ್ಷೇತ್ರ ಜನಸೇವೆ ಮಾಡಲು ಇರುವ ಶ್ರೇಷ್ಠವಾದ ಕ್ಷೇತ್ರವಾಗಿದೆ. ರೈತರು ಅವಲಂಭಿಸಿರುವ ಸಹಕಾರಿ ಸಂಘ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಬೇಡ್ಕಣಿ ಸೊಸೈಟಿ ಸದಸ್ಯರ ಹಿತದೃಷ್ಟಿಯಿಂದ ಉತ್ತಮ ಹೆಜ್ಜೆ ಇಡುತ್ತಿದೆ ಎಂದರು.
ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಕುಂಬ್ರಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಂಘದ ಉಪಾಧ್ಯಕ್ಷ ಬಾಬು ನಾಯ್ಕ ಕಡಕೇರಿ, ಬೇಡ್ಕಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಲ್ಲಾಸ ಗೌಡರ್, ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ, ಶನೇಶ್ವರ ದೇವಸ್ಥಾನದ ಅಧ್ಯಕ್ಷ ಜಿ.ಕೆ.ನಾಯ್ಕ, ರೈತ ಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ, ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಸಾಮಾಜಿಕ ಧುರೀಣ ವಸಂತ ನಾಯ್ಕ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಉಮೇಶ ನಾಯ್ಕ ಕಡಕೇರಿ ಉಪಸ್ಥಿತರಿದ್ದರು. ಉಪನ್ಯಾಸಕ ಎನ್.ಟಿ.ನಾಯ್ಕ ನಿರೂಪಿಸಿದರು.
