


ಸಿದ್ದಾಪುರ
ರಂಗಭೂಮಿಯ ಹಿರಿಮೆ ಬಹುದೊಡ್ಡದು. ರಂಗಸಂಸ್ಥೆಯನ್ನು ಸಂಘಟಿಸಿ, ಅದರ ಮೂಲಕ ನಾಟಕ ಪ್ರದರ್ಶಿಸುವದು ಸುಲಭದ ಕಾರ್ಯವಲ್ಲ. ಗ್ರಾಮೀಣ ಪ್ರದೇಶದಲ್ಲಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯನ್ನು ಎಲ್ಲೆಡೆ ಪಸರಿಸುವ ರಂಗ ಸೌಗಂಧದ ಕಾರ್ಯ ನಿಜಕ್ಕೂ ಶಾಘ್ಲನೀಯ ಎಂದು ಸಾಂಸ್ಕೃತಿಕ ಚಿಂತಕ ಗೋಪಾಲ ಹೆಗಡೆ ಹುಲೀಮನೆ ಹೇಳಿದರು.
ಅವರು ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಾಲಯ ಆಡಳಿತ ಮಂಡಳಿ, ಶ್ರೀ ದುರ್ಗಾ ವಿನಾಯಕ ಕೃಷಿಕ ಯುವಕ ಸಂಘ, ಶ್ರೀ ದುರ್ಗಾವಿನಾಯಕ ಯಕ್ಷಮಿತ್ರ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಸೆ.೮ರಂದು ಆಯೋಜಿಸಿದ ರಂಗ ಸೌಗಂಧ ತಂಡದ ೨೦೨೩-೨೪ನೇ ಸಾಲಿನಲ್ಲಿ ರಂಗಸಂಚಾರಕ್ಕಾಗಿ ಸಿದ್ಧಪಡಿಸಿದ ೩೬ ಅಲ್ಲ ೬೩ ಎನ್ನುವ ಹವ್ಯಕ ನಗೆ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಕರ್ನಾಟಕದ ರಂಗಭೂಮಿಯಲ್ಲಿ ದಂತ ಕಥೆಯಾಗಿರುವವರು ದಿ|ಹುಲಿಮನೆ ಸೀತಾರಾಮ ಶಾಸ್ತಿçಗಳು. ಅವರ ಕುಟುಂಬದ ಗಣಪತಿ ಹೆಗಡೆ ರಂಗ ಸೌಗಂಧ ರಂಗಸಂಸ್ಥೆಯ ಮೂಲಕ ರಂಗಭೂಮಿಯನ್ನು ಸಕ್ರೀಯಗೊಳಿಸುತ್ತಿರುವದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ದುರ್ಗಾವಿನಾಯಕ ದೇವಾಲಯದ ಮೋಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೆಸರ ಮಾತನಾಡಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಪ್ರದೇಶ ಸದಾ ಕ್ರಿಯಾಶೀಲವಾಗಿದೆ. ಇಲ್ಲಿನ ಪ್ರೇಕ್ಷಕರೂ ಸ್ಪಂದಿಸುತ್ತಾರೆ. ಇಂಥ ಚಟುವಟಿಕೆಗಳಿಗೆ ಎಲ್ಲರ ಸಹಕಾರವೂ ದೊರೆಯುತ್ತದೆ. ಹವ್ಯಕ ಕನ್ನಡದ ಈ ನಾಟಕವನ್ನು ಇಲ್ಲಿ ಪ್ರದರ್ಶನಮಾಡುವಲ್ಲಿ ಎಲ್ಲರ ಸಹಕಾರ ದೊರಕಿದೆ ಎಂದರು.
ಅತಿಥಿಗಳಾದ ಹಿರಿಯ ಕೃಷಿಕ, ಸಾಂಸ್ಕೃತಿಕ ಪ್ರೋತ್ಸಾಹಕ ಸುಬ್ರಾಯ ಹೆಗಡೆ ಮತ್ತೀಗಾರ ಮಾತನಾಡಿ ರಂಗ ಸೌಗಂಧ ತಂಡ ಪ್ರತಿವರ್ಷವೂ ಹೊಸಬಗೆಯ ನಾಟಕಗಳನ್ನು ಸಿದ್ಧಗೊಳಿಸಿ ಪ್ರದರ್ಶಿಸಿ ಎಲ್ಲೆಡೆಗೂ ಪ್ರದರ್ಶಿಸುತ್ತಿದೆ. ನಾವೆಲ್ಲ ಅವರಿಗೆ ಸಹಕರಿಸಬೇಕು ಎಂದರು.
ರಂಗ ಸೌಗಂಧ ತಂಡದ ಮುಖ್ಯಸ್ಥ ಗಣಪತಿ ಹೆಗಡೆ ಹುಲೀಮನೆ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಹೆಗಡೆ ಪೇಟೆಸರ ಸ್ವಾಗತಿಸಿ ವಂದಿಸಿದರು.
ನಂತರ ನಾಟಕ ಪ್ರದರ್ಶನಗೊಂಡಿತು.
