ತಾನಾಯಿತು ತನ್ನ ಕೆಲಸವಾಯಿತು ಎಂದು ತೆರೆಮರೆಯಲ್ಲಿ ಕೃಷಿ ಕಾಯಕ ಮಾಡುವುದು ಗ್ರಾಮೀಣ ರೈತನ ಸ್ವಭಾವ. ಹೀಗೆ ತನ್ನಷ್ಟಕ್ಕೆ ತಾನೇ ತೋಟಗಾರಿಕೆ ಮಾಡುತ್ತಾ ಕಾಳುಮೆಣಸು ಬೆಳೆದು ಸಸಿಯ ನರ್ಸರಿ ಮಾಡಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ರೈತರೊಬ್ಬರಿಗೆ ಈಗ ರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಸಿದ್ಧಾಪುರ ತಾಲೂಕಿನ ಕುಗ್ರಾಮ ಕಾನಸೂರು ಬಳಿಯ ಕೋಡ್ಸರ ಹುಣಸೆಕೊಪ್ಪದ ರೈತ ರಮಾಕಾಂತ ಹೆಗಡೆ ತನ್ನ ತೋಟದಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಾ ಕಾಳುಮೆಣಸಿನ ಸಸಿ ಮಾಡುವ ನರ್ಸರಿ ಪ್ರಾರಂಭಿಸಿ ಪ್ರಯೋಗಕ್ಕಿಳಿಯುತ್ತಾರೆ. ಈ ಪ್ರಯೋಗದಲ್ಲಿ ದೊರೆತ ಸಿಗಂದಿನಿ ಎನ್ನುವ ಕಾಳುಮೆಣಸಿನ ಬಳ್ಳಿ ಸಾಕಿ,ಸಸಿ ಮಾಡಿ ಮಾರಾಟಮಾಡುತಿದ್ದ ಈ ಕೃಷಿಕನಿಗೆ ತಾನು ಕಾಳುಮೆಣಸು ವೈವಿಧ್ಯದ ಒಂದು ವಿಶೇಶ ತಳಿಯನ್ನು ಸಲಹುತಿದ್ದೇನೆ ಎನ್ನುವ ಅರಿವೂ ಕೂಡಾ ಇರುವುದಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕೆ ಇಲಾಖೆ ಇಂಥ ರೈತರನ್ನು ಪ್ರೋತ್ಸಾಹಿಸುತ್ತಾ ಈ ಕುಗ್ರಾಮದ ರೈತ ಬೆಳೆಯುತ್ತಿರುವ ಕಾಳುಮೆಣಸಿನ ಪ್ರಭೇದ ವಿಶಿಷ್ಟ ತಳಿ ಎನ್ನುವುದನ್ನು ಗುರುತಿಸುತ್ತದೆ.
ಇಷ್ಟಾದ ನಂತರ ರಮಾಕಾಂತ ಹೆಗಡೆ ತೋಟಗಾರಿಕೆ ಇಲಾಖೆಯ ನಿರ್ಧೇಶನ, ಮಾರ್ಗದರ್ಶನದ ಮೇರೆಗೆ ತನ್ನ ತಳಿಯನ್ನು ರಾಷ್ಟ್ರಮಟ್ಟದ ವರೆಗೆ ಪರಿಚಯಿಸಿ ಅದರ ಪೇಟೆಂಟ್ ಪಡೆಯುತ್ತಾರೆ. ಈ ಸಾಧನೆ ಗಮನಿಸಿದ ಪ್ರೊಟಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಎಂಡ್ ಫಾರಮರ್ಸ್ ರೈಟ್ಸ್ ಅಥೋರಿಟಿ ಪ್ಲಾಂಟ್ ಜಿನಾಮ್ ಸೇವಿಯರ್ ಫಾರಮರ್ ರಿವಾರ್ಡ್‌೨೦೨೦-೨೧ ಕ್ಕೆ ಆಯ್ಕೆ ಮಾಡುತ್ತದೆ.
ತಳಿಸಂವರ್ಧಕ ಕೃಷಿಕ ಎನ್ನುವ ರಾಷ್ಟ್ರೀಯ ಪ್ರಶಸ್ತಿ ನೀಡಿರುವ ನಿಗಮ ಪಕ್ಕಾ ಗ್ರಾಮೀಣ ರೈತನೊಬ್ಬನಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಕೊಡಿಸುವ ಮೂಲಕ ರೈತನ ಸಾಧನೆಗೆ ಗೌರವ ನೀಡಿದೆ.
ಈ ಪ್ರಶಸ್ತಿ, ಕೀರ್ತಿಯಿಂದ ತಮ್ಮ ಬದುಕು ಬದಲಾಗುವ ಜೊತೆಗೆ ರೈತರ ಸಹಾಯಕ್ಕೆ ದೊರೆಯಲು ಉತ್ತೇಜನ ದೊರೆಯಿತು ಎನ್ನುವ ಪ್ರಶಸ್ತಿ ಪುರಸ್ಕೃತ ರೈತ ರಮಾಕಾಂತ ಹೆಗಡೆ ಇಂಥ ಗೌರವ ಪ್ರಶಸ್ತಿಗಳು ತಮ್ಮಿಂದ ಮತ್ತಷ್ಟು ಉತ್ತಮ ಕೆಲಸ ಮಾಡಿಸುತ್ತವೆ ಎನ್ನುತ್ತಾರೆ ಈ ಗ್ರಾಮೀಣ ತಳಿಸಂರಕ್ಷಕ ಕೃಷಿಕ.ಸಾಮಾನ್ಯ ರೈತನಾಗಿದ್ದ ರಮಾಕಾಂತ ಹೆಗಡೆ ರಾಷ್ಟ್ರಮಟ್ಟದ ಗೌರವ ಪಡೆಯುವ ಮೂಲಕ ಗ್ರಾಮೀಣ ರೈತರ ಆತ್ಮವಿಶ್ವಾಸ ವರ್ಧಿಸಿದ್ದಂತೂ ಸತ್ಯ.