ಮಾನಸಿಕ ವಿಪ್ಲವಗಳನ್ನು ಕಡಿಮೆ ಮಾಡಕೊಳ್ಳುವುದಕ್ಕೆ ಪೂಜೆ-ಪುನಸ್ಕಾರ ಸತ್ಕಥಾ ಕಾಲಕ್ಷೇಪ, ಸತ್ಸಂಗ ಹಾಗೂ ಯಕ್ಷಗಾನ ತಾಳಮದ್ದಳೆ ಮುಂತಾದವು ಸಹಕಾರಿಯಾಗುತ್ತವೆ. ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೇ ಸಾಂಸ್ಕೃತಿಕ ಚಟುವಟಿಕೆಗಳೂ ನಡೆದರೆ ಕೈಗೊಂಡ ಕಾರ್ಯಗಳು ಪೂರಕವಾಗಿ ನಡೆಯುತ್ತವೆ ಎಂದು ಅನಂತ ಹೆಗೆಡ ಗೊಂಟನಾಳ ಹೇಳಿದರು.
ಸಿದ್ಧಾಪುರ ದ ಗೊಂಟನಾಳದ ವೆಂಕಟರಮಣ ಹೆಗಡೆಯವರು ತಮ್ಮ ಮನೆಯಲ್ಲಿ ಅನೂಚಾನವಾಗಿ ನಲವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅನಂತ ಚತುರ್ದಶಿ ವ್ರತದ ಉದ್ಯಾಪನೆಯ ನಿಮಿತ್ತವಾಗಿ ಗುರುವಾರದಂದು ನಡೆದ ತಾಳಮದ್ದಳೆ ವೇದಿಕೆಯಲ್ಲಿ ಮಾತನಾಡುತ್ತ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ತಾಲೂಕಿನ ಕಲಾಭಾಸ್ಕರ (ರಿ) ಇಟಗಿಯವರು ಸಂಯೋಜನೆಯಲ್ಲಿ ಕವಿ ಮಾಲೆಕೊಡಲು ಶಂಭು ಗಣಪತಿ ಭಟ್ಟ ವಿರಚಿತ ಚಂದ್ರಹಾಸ ಚರಿತ್ರೆ ಎಂಬ ಯಕ್ಷಗಾನ ತಾಳಮದ್ದಳೆಯು ಭಕ್ತಿ-ಭಾವ ಪುರಸ್ಸರವಾಗಿ ಪ್ರದರ್ಶನವು ಸಾಂಗವಾಗಿ ನೆರವೇರಿತು. ಗಣಪತಿ ಹೆಗಡೆ ಮುರೂರು ಹಾಗೂ ಶಶಿಕಲಾ ಹೆಗಡೆ ದ್ಯಾವಣಗದ್ದೆ ಭಾಗವತರಾಗಿ ಸುಶ್ರಾವ್ಯ ಹಾಡುಗಾರಿಕೆಯ ಮೂಲಕ ಪ್ರದರ್ಶನದ ಯಶಸ್ಸಿಗೆ ಮೂಲಕಾರಣರಾದರು. ಶರತ್ ಜಾನಕೈ ಮದ್ದಳೆಯಲ್ಲಿಯೂ ರಘುಪತಿ ಹೂಡೆಹದ್ದ ಇವರು ಚಂಡೆವಾದನಗಳಲ್ಲಿ ಸಹಕರಿಸಿದರು.
ಬೆಂಕ್ಟಳ್ಳಿ ಅರುಣಕುಮಾರ ಬಿ.ಟಿ. ಸಾಗರ ರ ದುಷ್ಟಬುದ್ದಿ ಪಾತ್ರವು ಸೊಗಸಾಗಿ ನಿರೂಪಿತವಾಯಿತು. ರವಿಶಂಕರ ಸಾಗರ ರ ಮದನನ ಪಾತ್ರವು ಸ್ವಾರಸ್ಯಕರವಾಗಿ ಮೂಡಿಬಂತು. ವಿಷಯೆಯಾಗಿ ಇಟಗಿ ಮಹಾಬಲೇಶ್ವರ ಭಟ್ಟ ಕಾಣಿಸಿಕೊಂಡರು. ಕವಲಕೊಪ್ಪ ವಿನಾಯಕ ಹೆಗಡೆ ಚಂದ್ರಹಾಸನನ್ನು ಕಟ್ಟಿಕೊಟ್ಟರು. ಕಟುಕರ ಪಾತ್ರದಲ್ಲಿ ನಾರಾಯಣ ಹೆಗಡೆ ಕಾನಜಡ್ಡಿ, ಕುಳಿಂದನಾಗಿ ಮಂಜುನಾಥ ಭಟ್ಟ ಕಲ್ಮನೆ, ಕಪ್ಪದೂತ ಮತ್ತು ಬ್ರಾಹ್ಮಣರಾಗಿ ಮುರೂರು ನಾಗೇಂದ್ರ ಹಾಸ್ಯದ ಹೊನಲನ್ನೇ ಹರಿಸಿದರು.ಪ್ರಸನ್ನ ಹೊಸಗದ್ದೆ ಹಾಗೂ ಇತರರು ಉಳಿದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಇಂತಹ ಕಲಾಪ್ರದರ್ಶನಗಳಿಂದಲೇ ವ್ರತಗಳು ಸತ್ಫಲವನ್ನು ಕೊಡುತ್ತವೆ ಎನ್ನುವ ಅಭಿಪ್ರಾಯವು ಸಾರ್ವತ್ರಿಕವಾಗಿ ವ್ಯಕ್ತವಾಯಿತು.
ಸಿದ್ದಾಪುರ
ತಾಲೂಕಿನ ಕೋಡ್ಸರ(ಮುಠ್ಠಳ್ಳಿ)ಯ ಸಿದ್ಧಿವಿನಾಯಕ ರೈತಯುವಕ ಸಂಘ ಹಾಗೂ ಊರವರ ಸಹಕಾರದಲ್ಲಿ ಅನಂತಚತುರ್ದಶೀ ಪ್ರಯುಕ್ತ ಕೋಡ್ಸರ ಮುಠ್ಠಳ್ಳಿ ಶಾಲಾ ಆವಾರದಲ್ಲಿ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ ಗುರುವಾರ ನಡೆಯಿತು.
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು,ಆದರ್ಶ ಎಂ.ಆರ್, ಶಂಕರ ಭಾಗವತ ಯಲ್ಲಾಪುರ, ಗಜಾನನ ಕತಗಾಲ ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ(ಶಲ್ಯ), ವಾಸುದೇವ ರಂಗಾ ಭಟ್ಟ ಮಧೂರು(ಕೌರವ), ಗೊರಮನೆ ಮಂಜುನಾಥ (ಕರ್ಣ) ಪಾತ್ರವನನು ನಿರ್ವಹಿಸಿದರು.
ಸೀತಾರಾಮ ಹೆಗಡೆ ಹೊಂಡಗಾಶಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೆಕೈ ಅವರನ್ನು ಊರವರ ಪರವಾಗಿ ಬಿ.ಡಿ.ಹೆಗಡೆ ಹೊಲಗದ್ದೆ ಸನ್ಮಾನಿಸಿ ಗೌರವಿಸಿದರು.ರಾಮಕೃಷ್ಣ ಹೆಗಡೆ ಬಕ್ಕೇಮನೆ ಸ್ವಾಗತಿಸಿದರು. ನಾರಾಯಣ ಹೆಗಡೆ ನೇರ್ಲಮನೆ ವಂದಿಸಿದರು.