


ಶಿವಮೊಗ್ಗದ ಶಾಂತಿನಗರ ಸಮೀಪ ರಾಗಿಗುಡ್ಡಕ್ಕೆ ಇಂದು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.

ಶಿವಮೊಗ್ಗ: ಶಿವಮೊಗ್ಗದ ಶಾಂತಿನಗರ ಸಮೀಪ ರಾಗಿಗುಡ್ಡಕ್ಕೆ ಇಂದು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.
ಮನೆಗಳಿಗೆ ಭೇಟಿ ನೀಡಿ ಸ್ಥಳೀಯರ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ಸಂಬಂಧ ಪೊಲೀಸರು ಈವರೆಗೆ 24 ಎಫ್ಐಆರ್ ದಾಖಲಿಸಿದ್ದಾರೆ ಎಂದರು.
ಗಲಾಟೆ ಸಂದರ್ಭದಲ್ಲಿ ಗಂಭೀರ ಆಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ. ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿ ಶಿಕ್ಷೆ ಆಗುತ್ತದೆ ಎಂದರು.
ಸಚಿವರದ್ದು ಕಾಟಾಚಾರ ಭೇಟಿ: ಇನ್ನು ಸಚಿವರು ನಿಜವಾಗಿಯೂ ಹೆಚ್ಚು ಹಾನಿಗೀಡಾದ ಭಾಗಗಳಿಗೆ ಭೇಟಿ ಕೊಟ್ಟಿಲ್ಲ, ಸಣ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಜನರನ್ನು ಮಾತನಾಡಿಸಿ ಮಾಧ್ಯಮಗಳಿಗೆ ಫೋಟೋ, ವಿಡಿಯೊಕ್ಕೆ ಫೋಸ್ ನೀಡಿ ಪ್ರಚಾರ ಗಿಟ್ಟಿಸಿ ಕಾಟಚಾರಕ್ಕೆ ಬಂದು ಹೋಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ಎಂದರು.
ರಾಗಿಗುಡ್ಡದಲ್ಲಿ ಮುಸ್ಲಿಂ ಮಹಿಳೆಯರ ತೀವ್ರ ಆಕ್ರೋಶ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಮುಸ್ಲಿಂ ಮಹಿಳೆಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಸಮಸ್ಯೆ ಆಲಿಸುತ್ತಿಲ್ಲ, ಅನಗತ್ಯವಾಗಿ ನಮ್ಮ ಮಕ್ಕಳ ಬಂಧನವಾಗಿದೆ. ಮೆರವಣಿಗೆ ವೇಳೆ ಕಲ್ಲು ತೂರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ನಮಗೆ ನ್ಯಾಯ ಬೇಕು, ನಾವೂ ಹಿಂದೂ ಮುಸ್ಲಿ ಎಲ್ಲರೂ ಒಂದೇ. ಗಣೇಶ ಹಬ್ಬಕ್ಕೆ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹಬ್ಬ ಆಚರಣೆ ಮಾಡ್ತೀವಿ. ವಿಚಾರ ದೊಡ್ಡದಾಗುತ್ತಿದ್ದಂತೆ ನಮ್ಮನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಈ ವೇಳೆ ಸಚಿವರು ಮಧ್ಯ ಪ್ರವೇಶಿಸಿ ನಮ್ಮ ಸಮಸ್ಯೆ ಆಲಿಸಬೇಕಿದೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದರು.
