

ಸಿದ್ದಾಪುರ: ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿಯವರ ಕನಸಿನ ಕೂಸಾದ ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯದ ಸುವರ್ಣ ಮಹೋತ್ಸವವನ್ನು 2024ರ ಜನವರಿ 6 ಮತ್ತು 7 ರಂದು ನಡೆಸಲು ತೀರ್ಮಾನಿಸಲಾಗಿದೆ.

ಸೋಮವಾರ ಶಾಲೆಯ ಸಭಾಭವನದಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿನಾಂಕ ನಿಗದಿಗೊಳಿಸಲಾಗಿದೆ. ಚುಟುಕು ಬ್ರಹ್ಮ ದಿನಕರ ದೇಸಾಯಿಯವರಿಂದ 1965 ರಲ್ಲಿ ಸ್ಥಾಪನೆಯಾದ ಜನತಾ ವಿದ್ಯಾಲಯವು ಈಗಾಗಲೇ 58ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಕೊರೊನಾ ಮತ್ತಿತರ ಕಾರಣಗಳಿಂದ ಸುವರ್ಣ ಮಹೋತ್ಸವ ಮುಂದೂಡಲ್ಪಟ್ಟಿತ್ತು. ತಾಲೂಕಿನ ಕಡಕೇರಿ, ತ್ಯಾರ್ಸಿ, ಬೇಡ್ಕಣಿ, ಗುಂಜಗೋಡ, ಮರಲಗಿ, ವಾಟಗಾರ, ಹರಕನಳ್ಳಿ, ಹೊಸಳ್ಳಿ, ಭುವನಗುರಿ, ಮುತ್ತಿಗೆ, ಕುರಿಗೆತೋಟ, ಕಲ್ಕಣಿ ಮತ್ತಿತರ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣದ ಧಾರೆ ಎರೆದ ಜನತಾ ವಿದ್ಯಾಲಯದ ಸುವರ್ಣ ಮಹೋತ್ಸವ ಸದಾ ನೆನಪಿನಲ್ಲಿಡುವಂತೆ ಮಾಡಲು ಉತ್ಸವ ಸಮಿತಿ ಮುಂದಾಗಿದೆ ಎಂದು ವಿ.ಎನ್.ನಾಯ್ಕ ತಿಳಿಸಿದರು.
ಈಗಾಗಲೇ ವೇದಿಕೆ, ಊಟೋಪಚಾರ, ಹಣಕಾಸು, ಪ್ರಚಾರ, ಸುವರ್ಣ ಮಹೋತ್ಸವ ಸಂಚಿಕೆ ಸಮಿತಿ ರಚಿಸಲಾಗಿದೆ. ಆಯಾ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕಿದೆ. ಶಾಲೆಯ ನೆಲಹಾಸು ಹಾಗೂ ಸುಣ್ಣ-ಬಣ್ಣ ತುರ್ತಾಗಿ ಆಗಬೇಕಾಗಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ದಾನಿಗಳು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಹಣ ಕ್ರೋಢಿಕರಿಸಿ ಅಗತ್ಯ ಕಾಮಗಾರಿ ನಡೆಸಬೇಕಿದ್ದು, ಸರ್ವರು ಸಹಕಾರ ನೀಡಬೇಕು. ಶಾಲೆಯ ನೆಲಹಾಸು ಹಾಗೂ ಸುಣ್ಣ ಬಣ್ಣ ಮಾಡದೇ ಸುವರ್ಣ ಮಹೋತ್ಸವ ಆಚರಿಸಲು ಸಾಧ್ಯವಿಲ್ಲ. ನಾಳೆಯಿಂದಲೇ ದಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುವ ಕೆಲಸವಾಗಬೇಕು. ಸ್ಥಳೀಯವಾಗಿ ಸಾರ್ವಜನಿಕರು ಹಾಗೂ ಹಳೆಯ ವಿದ್ಯಾರ್ಥಿಗಳು ಉತ್ಸಾಹ ತೋರಬೇಕು ಎಂದರು.
ಈ ವೇಳೆ ಸುವರ್ಣ ಮಹೋತ್ಸವ ಸಮಿತಿಯ
ಗೌರವಾಧ್ಯಕ್ಷ ವಿ.ಎಸ್.ಹೆಗಡೆ, ಉಪಾಧ್ಯಕ್ಷರಾದ ಎ.ಬಿ.ನಾಯ್ಕ ಕಡಕೇರಿ, ಸುರೇಂದ್ರ ಗೌಡ, ಸದಸ್ಯರಾದ ನಾಗಪತಿ ನಾಯ್ಕ, ಪ್ರಶಾಂತ ನಾಯ್ಕ, ವೆಂಕಟ್ರಮಣ ನಾಯ್ಕ, ಪಾಂಡುರಂಗ ನಾಯ್ಕ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ, ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಪಾಲೇಕರ್, ಬೇಡ್ಕಣಿ ಗ್ರಾಮ ಪಂಚಾಯ್ತಿ ಸದಸ್ಯ ಗೋವಿಂದ ನಾಯ್ಕ, ಪ್ರಕಾಶ ನಾಯ್ಕ ಬೇಡ್ಕಣಿ, ಎಂ.ಬಿ.ನಾಯ್ಕ ನಾಯ್ಕ ಕಡಕೇರಿ, ಪ್ರಕಾಶ ನಾಯ್ಕ ಹರಕನಳ್ಳಿ, ಸಿ.ಎನ್.ಹೆಗಡೆ, ಶಿಕ್ಷಕ ಜಿ.ಟಿ.ಭಟ್ ಉಪಸ್ಥಿತರಿದ್ದರು.

