ಭಿನ್ನಮತ ಶಮನಕ್ಕೆ ಡಿವಿ ಸದಾನಂದ ಗೌಡಗೆ ಹೈಕಮಾಂಡ್ ಬುಲಾವ್; ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್?
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆ ಎನ್ನುವ ವದಂತಿಗಳ ನಡುವೆಯೇ, ಬಿಜೆಪಿ ಹೈಕಮಾಂಡ್ ಅವರನ್ನು ಬುಧವಾರ ದೆಹಲಿಗೆ ಕರೆಸಿಕೊಂಡಿದೆ.
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆ ಎನ್ನುವ ವದಂತಿಗಳ ನಡುವೆಯೇ, ಬಿಜೆಪಿ ಹೈಕಮಾಂಡ್ ಅವರನ್ನು ಬುಧವಾರ ದೆಹಲಿಗೆ ಕರೆಸಿಕೊಂಡಿದೆ.
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಸದಾನಂದ ಗೌಡ, ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಪ್ರಮುಖರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯಲ್ಲಿನ ಶೇ 75ರಷ್ಟು ಜನರಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ಇತ್ತೀಚೆಗೆ ಅಸಮಾಧಾನ ಹೊರಹಾಕಿದ್ದರು.
ಅವರ ಆಪ್ತ ಮೂಲಗಳ ಪ್ರಕಾರ, ಡಿಸಿಎಂ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಲೋಕಸಭೆ ಚುನಾವಣೆಗೆ ಮುನ್ನ ಪಕ್ಷ ಸೇರುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಸದಾನಂದ ಗೌಡ ಅವರೊಂದಿಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಪಕ್ಷದೊಳಗೆ ಪ್ರಾಮುಖ್ಯತೆ ಪಡೆದಿದ್ದ ಸದಾನಂದ ಗೌಡರು ತಮ್ಮ ಕಾರ್ಯವೈಖರಿಯಿಂದ ಹೈಕಮಾಂಡ್ ಅನ್ನು ಮೆಚ್ಚಿಸಲು ವಿಫಲರಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಪಕ್ಷದ ಸೂಚನೆಯಂತೆ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟ ಸದಾನಂದ ಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಸಂಪುಟದಲ್ಲಿ ಪ್ರತಿಷ್ಠಿತ ರೈಲ್ವೆ ಖಾತೆಯನ್ನು ನೀಡಲಾಯಿತು. ನಂತರ ಸಚಿವ ಸ್ಥಾನವನ್ನು ಹಿಂಪಡೆದು ಅವರನ್ನು ಕೇಂದ್ರ ಕಾನೂನು ಸಚಿವರನ್ನಾಗಿ ಮಾಡಲಾಯಿತು.
ನಂತರ, ಅವರನ್ನು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವರನ್ನಾಗಿ ಮಾಡಲಾಯಿತು. ಜುಲೈ 2021 ರಲ್ಲಿ ಕ್ಯಾಬಿನೆಟ್ ಪುನರ್ ರಚನೆಗೆ ಮುಂಚಿತವಾಗಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಲಾಯಿತು.
ಬೆಂಗಳೂರು ಉತ್ತರ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಸದಾನಂದ ಗೌಡ ಅವರು, ಬಿಎಸ್ ಯಡಿಯೂರಪ್ಪ ಅವರ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು.
ಸದಾನಂದ ಗೌಡ ಅವರಿಗೆ ಪ್ರತಿಷ್ಠಿತ ಹುದ್ದೆ ಸಿಗುವಲ್ಲಿ ಯಡಿಯೂರಪ್ಪ ಅವರ ಪಾತ್ರವಿದೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದೊಂದಿಗೆ ಸೇರಿಕೊಂಡು ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಪರಿಣಾಮ ಅವರನ್ನು ಪದಚ್ಯುತಗೊಳಿಸಲಾಯಿತು.
ಸದ್ಯ ಬಿಜೆಪಿಯಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿ ಸದಾನಂದ ಗೌಡರು ಇದ್ದಾರೆ. ಜೆಡಿಎಸ್ ಅಥವಾ ಮಂಡ್ಯ ಲೋಕಸಭೆಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿದೆ.
ಪಕ್ಷದ ನಾಯಕತ್ವದೊಂದಿಗಿನ ಮಾತುಕತೆಯ ನಂತರ ಅತೃಪ್ತರು ಕಾಂಗ್ರೆಸ್ ಸೇರುವ ಬಗ್ಗೆ ಅಂತಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ವಿವರಿಸುತ್ತವೆ. (kpc)