ಶಿಸ್ತು ಉಲ್ಲಂಘಿಸಿದರೆ, ಪಕ್ಷದ ಚೌಕಟ್ಟು ಮೀರಿದರೆ ಕ್ರಮ: ಕಾಂಗ್ರೆಸ್ ಶಾಸಕ, ಸಚಿವರಿಗೆ ಸುರ್ಜೇವಾಲ ಎಚ್ಚರಿಕೆ
ಕಾಂಗ್ರೆಸ್ ಶಾಸಕರು ಮತ್ತು ಸಚಿವರ ವಿಭಿನ್ನ ಹೇಳಿಕೆಗಳು ಹೆಚ್ಚಾಗುತ್ತಿರುವಂತೆಯೇ ಎಚ್ಚೆತ್ತುಕೊಂಡ ಹೈಕಮಾಂಡ್, ಪಕ್ಷದ ಚೌಕಟ್ಟು ಮೀರಿದರೆ, ಶಿಸ್ತು ಉಲ್ಲಂಘಿಸಿದರೆ ಹಾಗೂ ಪಕ್ಷದ ಆಂತರಿಕ ವಿಚಾರಗಳನ್ನು ಬಾಹ್ಯವಾಗಿ ಚರ್ಚೆ ಮಾಡಿದರೆ ಸೂಕ್ತ…
ಬೆಂಗಳೂರು: ಕಾಂಗ್ರೆಸ್ ಶಾಸಕರು ಮತ್ತು ಸಚಿವರ ವಿಭಿನ್ನ ಹೇಳಿಕೆಗಳು ಹೆಚ್ಚಾಗುತ್ತಿರುವಂತೆಯೇ ಎಚ್ಚೆತ್ತುಕೊಂಡ ಹೈಕಮಾಂಡ್, ಪಕ್ಷದ ಚೌಕಟ್ಟು ಮೀರಿದರೆ, ಶಿಸ್ತು ಉಲ್ಲಂಘಿಸಿದರೆ ಹಾಗೂ ಪಕ್ಷದ ಆಂತರಿಕ ವಿಚಾರಗಳನ್ನು ಬಾಹ್ಯವಾಗಿ ಚರ್ಚೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬುಧವಾರ ಎಚ್ಚರಿಕೆ ನೀಡಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ತುರ್ತು ಸಭೆಯ ಬಳಿಕ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರು, ಶಾಸಕರು, ಸಚಿವರು ತಮ್ಮ ಇಲಾಖೆ, ಕ್ಷೇತ್ರ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳತ್ತ ಗಮನ ಹರಿಸಲಿ. ಪಕ್ಷದ ಶಿಸ್ತು ಉಲ್ಲಂಘಿಸಿ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಪಕ್ಷದ ಚೌಕಟ್ಟು ಮೀರಿ ಸಚಿವರು, ಶಾಸಕರು ಮಾತನಾಡಬಾರದು. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿಯೂ ಯಾವುದೇ ಹೇಳಿಕೆ ನೀಡುವ ಹಾಗಿಲ್ಲ. ಪಕ್ಷದ ಚೌಕಟ್ಟು ಮೀರಿ ಹೇಳಿಕೆಗಳನ್ನು ನೀಡಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಇಂದಿನ ಸಭೆಯಲ್ಲಿ ನಿಗಮ ಮಂಡಳಿಗಳ ನೇಮಕಾತಿಯ ಬಗ್ಗೆಯೂ ಚರ್ಚೆ ನಡೆದಿದೆ. ನೇಮಕಾತಿಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರನ್ನೂ ಪರಿಗಣಿಸಲಾಗುವುದು. ಮಧ್ಯ ಪ್ರದೇಶ ಚುನಾವಣೆಯ ಬಳಿಕ ಮತ್ತೆ ಈ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ ಎಂದು ಸುರ್ಜೇವಾಲ ಅವರು ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಭರವಸೆ ನೀಡಿದ್ದಾರೆ. 15 ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. (ಕಪ್ರಡಾ)