


ಮತ್ತೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಬಹುವೈಶಿಷ್ಟ್ಯಗಳ ಆಸ್ಫತ್ರೆ ಕೂಗು ಅನುರಣಿಸಿದೆ. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಹುಟ್ಟೂರು ಸಿದ್ಧಾಪುರದ ಸರ್ಕಾರಿ ಆಸ್ಫತ್ರೆ ಮೇಲ್ದರ್ಜೆಗೇರಿಸಿದ ನಾಲ್ಕು ದಶಕಗಳ ನಂತರ ಕೂಡಾ ಸಿದ್ಧಾಪುರ,ಜೊಯಡಾ,ಮುಂಡಗೋಡಿನಂಥ ತಾಲೂಕುಗಳ ಜನ ಸಾಮಾನ್ಯ ವ್ಯವಸ್ಥೆಯ ವೈದ್ಯಕೀಯ ಚಿಕಿತ್ಸೆಗೂ ನೆರೆಯ ತಾಲೂಕುಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಗಳಿವೆ!
ಕಾರವಾರ ಜಿಲ್ಲಾ ಕೇಂದ್ರವಾಗಿದ್ದರೂ ಕೂಡಾ ಆಭಾಗದ ಜನ ಉನ್ನತ ಚಿಕಿತ್ಸೆಗಾಗಿ ಬಾಂಬೋಲಿ,ಗೋವಾ ಪಣಜಿ ಕಡೆ ಧಾವಿಸುತ್ತಾರೆ. ಹಳಿಯಾಳ.ಜೊಯಡಾ.ಮುಂಡಗೋಡುಗಳ ಜನರಿಗೆ ಅಕ್ಕ ಪಕ್ಕದಲ್ಲಿ ಹುಬ್ಬಳ್ಳಿ, ಬೆಳಗಾವಿಗಳ ವ್ಯವಸ್ಥೆಗಳಾದರೂ ದೊರೆಯುತ್ತವೆ.ಯಲ್ಲಾಪುರ, ಸಿದ್ಧಾಪುರ,ಅಂಕೋಲಾ,ಕುಮಟಾ,ಹೊನ್ನಾವರ, ಭಟ್ಕಳಗಳ ಜನ ಮಂಗಳೂರು, ಉಡುಪಿಗಳ ಕಡೆ ಧಾವಿಸದೆ ವಿಧಿ ಇಲ್ಲ.
ಜಿಲ್ಲೆಯ ೧೨ ತಾಲೂಕುಗಳಲ್ಲಿ ಕನಿಷ್ಠ ಹತ್ತು ತಾಲೂಕುಗಳ ಜನ ವೈಧ್ಯಕೀಯ ವ್ಯವಸ್ಥೆ ಇಲ್ಲದೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಈ ಐವತ್ತು ವರ್ಷಗಳಲ್ಲಿ ಸರ್ಕಾರ ಮತ್ತು ಆಳುವವರಿಗೆ ವೈಧ್ಯಕೀಯ ಸೇರಿದಂತೆ ನಾಗರಿಕ ಸೇವಾ,ಶೌಲಭ್ಯಗಳನ್ನು ಕೇಂದ್ರೀಕರಿಸಬಾರದು ಎನ್ನುವ ಸತ್ಯ ಅರ್ಥವಾಗಿಲ್ಲ ಎನ್ನೋಣವೆ?
ಪ್ರೇಮಿಯೊಬ್ಬ ತನ್ನ ಪ್ರೀಯತಮೆ ನೋಡಲು ಹೋಗಲು ದಾರಿ ಇಲ್ಲ ಎಂದು ಗುಡ್ಡ ಕಡೆದು ರಸ್ತೆ ಮಾಡಿದನಂತೆ!
ಶಾನುಭೋಗರು ಜಾತಿ-ಆದಾಯ ಪ್ರಮಾಣ ಪತ್ರ ತಿರಸ್ಕರಿಸಿದ್ದಕ್ಕೆ ಸಾಮಾನ್ಯನೊಬ್ಬ ಶಾಸಕನಾಗಿ,ಸಚಿವನಾದನಂತೆ!
ಎಷ್ಟೊಂದು ಸಾಧ್ಯತೆಗಳು…
ನಮ್ಮ ಯುವಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಮಾಡಿದಂತೆ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಫತ್ರೆ ಸ್ಥಾಪನೆಗೆ ವಿಫಲ ಪ್ರಯತ್ನ ನಡೆಸಿತು.
ಸಾಮಾಜಿಕ ನ್ಯಾಯಕ್ಕಾಗಿ ಅಂಕೋಲಾದಿಂದ ಕಾಗೋಡಿಗೆ ಪಾದಯಾತ್ರೆ ನಡೆಯಿತು. ಅರಣ್ಯ ಸಾಗುವಳಿ ಭೂಮಿ ಹಕ್ಕಿಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕೈದು ಪಾದಯಾತ್ರೆಗಳಾದವು. ಈ ಪಾದಯಾತ್ರೆಗಳಿಗೂ ಕಾಶಿಯಾತ್ರೆಗೂ ಅಂಥಾ ವ್ಯತ್ಯಾಸಗಳೇನೂ ಕಾಣಲೇ ಇಲ್ಲ.
ಈಗ ಅನಂತಮೂರ್ತಿ ಹೆಗಡೆ ಶಿರಸಿಯಿಂದ ಘಟ್ಟ ಇಳಿದು ಜಿಲ್ಲಾಧಿಕಾರಿಗಳ ಕಾರವಾರ ಕಛೇರಿ ವರೆಗೆ ಒಂದು ವಾರದ ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ಪ್ರತಿಪ್ರಯತ್ನ, ಹೋರಾಟಕ್ಕೂ ರಾಜಕೀಯ ಆರೋಪ, ಟೀಕೆ- ವಿಮರ್ಶೆ, ಆಕ್ಷೇಪಗಳು ಇದ್ದೇ ಇರುತ್ತವೆ. ಆದರೆ ವ್ಯಕ್ತಿಯೊಬ್ಬರ ಬದ್ಧತೆ ಕೂಡಾ ಪರೀಕ್ಷಿಸಲ್ಪಡುತ್ತದೆ. ಎಲ್ಲರಿಗೂ ಬೇಕಾಗುವ ಆಸ್ಫತ್ರೆ, ಸಾಮಾಜಿಕ ನ್ಯಾಯ, ವೈಧ್ಯಕೀಯ ನ್ಯಾಯ ಶಿಕ್ಷಣ, ಅರಣ್ಯ ಭೂಮಿ ಹಕ್ಕು ಅಂತಿಮವಾಗಿ ಸಾಮೂಹಿಕ ಸ್ವಾತಂತ್ರ್ಯಕ್ಕಾಗಿ ಕೆಲವರಾದರೂ ಹೋರಾಡಬೇಕಲ್ಲವೆ?
ಅನಂತಮೂರ್ತಿ ಹೆಗಡೆಯವರಂಥವರನ್ನು ಬೆಂಬಲಿಸದಿದ್ದರೂ ಶುಭಹಾರೈಸಿ ಉತ್ತೇಜಿಸಲೇನಡ್ಡಿ?
