ದಾಂಡೇಲಿ : ಇಂದು ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ನಾವು ಹಾಗೆ ಭಾವಿಸುವುದಕ್ಕಿಂತ ಇಂದು ಓದುಗರ ಅಭಿರುಚಿಗೆ ತಕ್ಕಂತಹ ಸಾಹಿತ್ಯವನ್ನು ರಚಿಸುವ ಅಗತ್ಯವಿದೆ ಎಂದು ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರು ಹಾಗೂ ಸರ್ಕಾರಿ ವಕೀಲರಾದ ಶಿವರಾಯ ಎಸ್. ದೇಸಾಯಿ ನುಡಿದರು.
ಅವರು ಕರ್ನಾಟಕ ರಾಜ್ಯೋತ್ಸವದ ಭಾಗವಾಗಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ಕಾರ್ತಿಕ: ಅನುದಿನ- ಅನುಸ್ಪಂದನ’ ಎಂಬ ಶೀರ್ಷಿಕೆಯಡಿ ನವೆಂಬರ್ ತಿಂಗಳಿಡಿ ಪ್ರತಿದಿನ ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮಕ್ಕೆ ಸಾಹಿತ್ಯ ಭವನದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕನ್ನಡ ಭಾಷೆ ಹಿಂದೆಯೂ ಶ್ರೀಮಂತವಾಗಿತ್ತು. ಇಂದೂ – ಮುಂದೆಯೂ ಶ್ರೀಮಂತವಾಗಿಯೇ ಇರುತ್ತದೆ. ಕನ್ನಡದ ಅಸ್ಮಿತೆ ಮತ್ತು ಸೊಬಗನ್ನ ಯಾರಿಂದಲೂ ಕೂಡ ದುರ್ಬಲಗೊಳಿಸಲು ಸಾಧ್ಯವಿಲ್ಲ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹಿರಿಮೆ ನಮ್ಮ ಭಾಷೆಯಿದ್ದು ಎಂದ ಶಿವರಾಯ ದೇಸಾಯಿಯವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜೀವನಪ್ರೀತಿಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಚಾರ್ಯರಾದ ಲತಾ ಪಾಟೀಲರು ಮಾತನಾಡಿ ‘ಕನ್ನಡ ಕಾರ್ತಿಕ :ಅನುದಿನ -ಅನುಸ್ಪಂದನ’ ಎಂಬುದೇ ಒಂದು ಕಾವ್ಯಾತ್ಮಕ ವಾದ ಶೀರ್ಷಿಕೆ. ಈ ಶೀರ್ಷಿಕೆಯ ಮೂಲಕ ತಿಂಗಳಿಡಿ ಪ್ರತಿದಿನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕೂಡ ಒಂದು ಸಾಹಸದ ಕೆಲಸವೇ ಆಗಿದೆ. ಬಿ.ಎನ್. ವಾಸರೆಯವರ ಸಾರಥ್ಯದಲ್ಲಿ ಸಾಹಿತ್ಯ ಪರಿಷತ್ತು ಉತ್ತಮ ಸಂಘಟನೆಗಳನ್ನ ಮಾಡುತ್ತಿದ್ದು ಕನ್ನಡದ ಹಾಗೂ ಸಾಹಿತ್ಯದ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಕೂಡ ಸಹಕರಿಸಬೇಕು ಎಂದರು.
ಹೆಸರಾಯಿತು ಕರ್ನಾಟಕ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ದಾಂಡೇಲಿಯ ಕೆನರಾ ವೆಲ್ಫರ ಟ್ರಸ್ಟಿನ ಬಿ. ಎಡ್. ಕಾಲೇಜಿನ ಉಪನ್ಯಾಸಕರಾದ ನಾಗೇಶ ಎಸ್. ನಾಯ್ಕರು ಪುರಾಣ ಕಾಲದಲ್ಲಿಯೇ ‘ಕರ್ನಾಟ’ ಎಂಬ ಹೆಸರು ಪ್ರಸ್ತಾಪವಾಗಿದೆ. ಹಾಗಾಗಿ ಕರ್ನಾಟಕ ಎಂಬ ಹೆಸರಿಗೊಂದು ಇತಿಹಾಸವಿದೆ. ಹಿರಿಮೆಯಿದೆ ಎಂದು ತಿಳಿಸಿ ಕರ್ನಾಟಕ ಎಂದು ಮರು ನಾಮಕರಣವಾದ ಬಗೆಯ ಬಗ್ಗೆ ವಿವರಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ್ , ಹಳಿಯಾಳ ತಾಲೂಕಾ ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ‘ಕನ್ನಡ ಕಾರ್ತಿಕ’ ಸರಣಿ ಕಾರ್ಯಕ್ರಮದ ಸಂಘಟನೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ ಕಳೆದ ವರ್ಷ ಕೂಡ ‘ಕನ್ನಡ ಕಾರ್ತಿಕ’ ಶೀರ್ಷಿಕೆಯಲ್ಲಿ ನವಂಬರ್ ತಿಂಗಳಿಡಿ ಕಾರ್ಯಕ್ರಮವನ್ನು ಮಾಡಿ ಸಾಹಿತ್ಯ ವಲಯದಲ್ಲಿ ಪ್ರೀತಿಗಳಿಸಿದ್ದೆವು. ಈ ವರ್ಷ ಕೂಡ ಅದನ್ನ ಮುಂದುವರಿಸಲಾಗಿದೆ. ಸಭಾಭವನಗಳಲ್ಲಷ್ಟೇ ಅಲ್ಲದೆ ಶಾಲೆ, ಕಾಲೇಜು, ಮನೆಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪರಿಷತ್ತನ್ನ ಜನಸಾಮಾನ್ಯರಡೆಗೆ ಒಯ್ಯುವ ಕೆಲಸ ಮಾಡಲಾಗುತ್ತಿದೆ. ಕಳೆದ ವರ್ಷ ಮಾಡಿದ ಆರು ತಾಲೂಕು ಸಾಹಿತ್ಯ ಸಮ್ಮೇಳನಗಳ ಅನುದಾನ ಇನ್ನು ಬರಬೇಕಿದೆ. ಈ ವರ್ಷವಂತೂ ಸಾಹಿತ್ಯ ಪರಿಷತ್ತಿಗೆ ನಿರ್ವಹಣಾ ಅನುದಾನ ಸೇರಿದಂತೆ ಯಾವ ಅನುದಾನವೂ ಬಂದಿಲ್ಲ. ಆದರೂ ಕೂಡಾ ಜಿಲ್ಲೆಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿರಂತರ ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಿವೆ. ತಿಂಗಳಿಡೀ ನಡೆಯುವ ‘ಕನ್ನಡ ಕಾರ್ತಿಕ’ ಕಾರ್ಯಕ್ರಮಗಳನ್ನೂ ಕೂಡ ಕಸಾಪ ತಾಲೂಕು ಘಟಕದವರು ಆಯಾ ತಾಲೂಕಿನ ಸಂಘ-ಸಂಸ್ಥೆಗಳ ಹಾಗೂ ಸಹೃದಯಿಗಳ ಸಹಕಾರದೊಂದಿಗೆ ಸಂಘಟಿಸುತ್ತಿದ್ದಾರೆ. ನಾವು ಅನುದಾನಕ್ಕಾಗಿ ಕಾಯುವುದಿಲ್ಲ. ನಿರಂತರ ಕಾರ್ಯಕ್ರಮ ಮುಂದುವರಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರ ಸೂಚಿಸಿದ ಕನ್ನಡ ಗೀತೆಗಳನ್ನು ಸ್ಥಳೀಯ ಕಲಾವಿದರು ಪ್ರಸ್ತುತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ವಂದಿಸಿದರು. ದಾಂಡೇಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎನ್. ಆರ್. ನಾಯ್ಕ, ಹಾಗೂ ಪ್ರವೀಣ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಸಾಂಸ್ಕೃತಿಕ ಸಂಘಟಕರು ಹಾಗೂ ನಗರದ ಗಣ್ಯರನೇಕರು ಭಾಗವಹಿಸಿದ್ದರು.