
ಸಿದ್ದಾಪುರ: ಕಳೆದ 30 ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಸುಬೇದಾರ್ ಆಗಿ ನಿವೃತ್ತಿ ಹೊಂದಿದ್ದ ಸಿದ್ದಾಪುರ ತಾಲೂಕಿನ ಹಲಗೇರಿಯ ಜಯರಾಮ ನಾಯ್ಕ ಅವರಿಗೆ ಗುರುವಾರ ಹುಟ್ಟೂರಿನಲ್ಲಿ ಅಭೂತಪೂರ್ವ ಸ್ವಾಗತ ನೀಡಿ ಸನ್ಮಾನಿಸಲಾಯಿತು.
ತಾಯ್ನಾಡಿಗೆ ಆಗಮಿಸಿದ ಜಯರಾಮ ಕೆ ನಾಯ್ಕ ಅವರನ್ನು ಸಿದ್ದಾಪುರದಿಂದ ಹಲಗೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಹುಟ್ಟೂರಿಗೆ ಕರೆ ತರುತ್ತಿದ್ದಂತೆ ಹಲಗೇರಿಯ ದೇವಸ್ಥಾನದ ಎದುರು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿಂದ ಪೂರ್ಣಕುಂಭದೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಭವನದವರೆಗೆ ಮೆರವಣಿಗೆ ನಡೆಸಲಾಯಿತು.
ತಾಲೂಕಾ ಮಾಜಿ ಸೈನಿಕರ ಸಂಘ, ಕರ್ನಾಟಕ ಪಬ್ಲಿಕ್ ಶಾಲೆ ಹಲಗೇರಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಯೋಧ ಜಯರಾಮ ನಾಯ್ಕ ದಂಪತಿಯನ್ನು ಹೃದಯಸ್ಪರ್ಷಿಯಾಗಿ ಸನ್ಮಾನಿಸಿದರು.

ಸನ್ಮಾನ ನೆರವೇರಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮೂವತ್ತು ವರ್ಷಗಳ ಕಾಲ ಜೀವ ಪಣಕ್ಕಿಟ್ಟು ನಿಸ್ವಾರ್ಥ ಮನೋಭಾವದಿಂದ ದೇಶ ಸೇವೆ ಸಲ್ಲಿಸಿದ ಜಯರಾಮ ನಾಯ್ಕರನ್ನು ನಾವೆಲ್ಲರೂ ಸದಾ ಗೌರವದಿಂದ ಕಾಣಬೇಕು. ಜೀವದ ಹಂಗು ತೊರೆದು ಗಡಿ ಕಾಯುತ್ತಿರುವ ಯೋಧರ ಸೇವೆ ಸ್ಮರಣೀಯವಾಗಿದೆ. ಸಮಾಜ ಯೋಧರನ್ನು ಪೂಜ್ಯ ಹಾಗೂ ಗೌರವದಿಂದ ಕಾಣಬೇಕು. ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ನಮ್ಮ ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಮರೆಯಬಾರದು. ದೇಶಾಭಿಮಾನ ಪ್ರತಿಯೊಬ್ಬರಲ್ಲೂ ಸದಾ ಜಾಗೃತವಾಗಿರಬೇಕು. ಯುವಜನತೆ ಸೈನ್ಯಕ್ಕೆ ಸೇರಲು ಉತ್ಸುಕರಾಗಬೇಕು. ದೇಶದ ಭದ್ರತೆ ಸುಭದ್ರವಾಗಿರಲು ಸೈನಿಕರ ಪಾತ್ರ ಮುಖ್ಯವಾಗಿದೆ. ಸುಧೀರ್ಘ 30 ವರ್ಷಗಳ ಕಾಲ ಯೋಧರಾಗಿ ದೇಶ ಸೇವೆ ಮಾಡಿದ ಜಯರಾಮ ನಾಯ್ಕರ ದೇಶ ಸೇವೆ ಅಪಾರವಾಗಿದೆ ಎಂದು ಭಾಷಣದ ವೇಳೆ ಭಾವುಕರಾದರು.
ಸನ್ಮಾನ ಸ್ವೀಕರಿಸಿದ ಯೋಧ ಜಯರಾಮ ನಾಯ್ಕ ಮಾತನಾಡಿ, ದೇಶದ ಜನರು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ ರಾತ್ರಿ-ಹಗಲೆನ್ನದೇ ನಿದ್ರೆ ಬಿಟ್ಟು ಕಾಯುತ್ತಿರುವ ಸೈನಿಕರು. 140 ಕೋಟಿ ಜನರನ್ನು ಕೇವಲ 15 ಲಕ್ಷ ಜನ ಯೋಧರು ರಕ್ಷಣೆ ಮಾಡುತ್ತಿದ್ದಾರೆ. ಸೈನಿಕರಾದವರು ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢರಾಗಿರಬೇಕು. ಪಾಲಕರು ತಮ್ಮ ಮಕ್ಕಳನ್ನು ದೇಶದ ಸೈನ್ಯಕ್ಕೆ ಸೇರಲು ಪ್ರೇರೇಪಿಸಬೇಕು. ಯೋಧರನ್ನು ಸಮಾಜ ಗೌರವದಿಂದ ನೋಡಬೇಕು ಎಂದರು.
ಗ್ರಾಮಸ್ಥರ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಬಿ.ಜಿ.ನಾಯ್ಕ ಮಾತನಾಡಿ, ಜಯರಾಮ ನಾಯ್ಕರ ಸೇವೆ ಯುವಕರಿಗೆ ಸ್ಪೂರ್ತಿಯಾಗಿದೆ. ಯುವಕರು ದೇಶದ ರಕ್ಷಣೆಯಲ್ಲಿ ತೊಡಗದಿದ್ದರೆ ಮುಂದೆ ಕಷ್ಟವಿದೆ. ತಾಯ್ನಾಡಿನ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ.
ಕಾಲೇಜಿನ ಹಿರಿಯ ಉಪನ್ಯಾಸಕ ಲೋಕೋಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಹಲಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೋಹಿನಿ ನಾಯ್ಕ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಹಲಗೇರಿ ಪಬ್ಲಿಕ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಂತೋಷ ನಾಯ್ಕ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಕುಮಾರ ಗೌಡರ್, ನಿವೃತ್ತ ಯೋಧ ಪಿ.ಡಿ.ನಾಯ್ಕ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಮಂಜುನಾಥ ನಾಯ್ಕ ಸ್ವಾಗತಿಸಿದರು.
