ಕಥೆ: ಮಾರೆಮ್ಮನ ಕನ್ಸು…
ರಚನೆ: ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ಬಳ್ಳಾರಿ.
Manjuamazing7@gmail.com Mob: 9379857775
“ಬೋಸುಡಿಕಿ, ರೊಕ್ಕ ಕೊಡಂದ್ರ ಇಲ್ಲದ್ಮಾತಾಡ್ತಾಳ” ಅಂತಾ ಎಡೆ ಎತ್ತಿದ ನಾಗರಾವ್ ತರ ಬುಸುಗುಡ್ತಾ ಕೈಯಾಗ ಎಣ್ತಿಯ ಕರಿಮಣಿಸರ ಇಡ್ಕಂಡು ಮಾದ್ರು ಮೂಕ ಮನೆಗ್ಲಿಂದ ವೊರಕಬಂದ. ಆತೊದ್ಮೇಲೆ ಈ ಕಡೆ ಪಾಪ ಮಾರೆಮ್ಮನ ಅವಸ್ಥೆ ನೋಡಂಗಿದ್ದಿಲ್ಲ.ನೋಡುತಿದ್ರೆ ಎಂತೋರ್ಗೂ ಅಯ್ಯೋ ಅನ್ನಂಗಿದ್ಲು. ಮೂಕ ತನಿಗೆ ಕುಡ್ಯಾಕ ರೊಕ್ಕ ಕೊಡಲಿಲ್ಲಂತೇಳಿ ಎಣ್ತಿನಾ ಕೂದ್ಲಿಡ್ಕಂಡು ಜರಜರ ಅಂತ ವೊಸ್ತಲ್ಗೆತಂದು ಕತ್ಗೊದ್ದಂಗ ಒದ್ದು ಬಿಸಾಕೋಗಿದ್ದ.
ಆದ್ರೆ ಆಕಿಗೆ ಒದ್ದಿದ್ಕಾಗಲಿ, ತಾಳಿ ಕಿತ್ಕೊಂಡೋಗಿದ್ಕಾಗಲಿ ಬಾದ್ಕಾರ್ಲಿಲ್ಲ. ಮದ್ವೆಯಾದ ವೊಸ್ದಾರ್ಗ ಮಾತ್ರ ಒಂದೆರ್ಡು ವರ್ಷ ಆಕಿ ಜೊತ್ಗಿ ಬೇಸಿದ್ದ. ಯಾವಾಗ ಮಗ್ಳು ಲಚುಮಿ ಉಟ್ಟಿ, ಕಡೆಮನೆ ಲಸುಮನ ಕೂಡ ಕಟ್ಗೆ ಕಡ್ಯಾಕ ಕ್ವಾಂಟ್ರ ಜಲಿ ಇಡ್ಕಂಡ, ಅವಾಗಿಂದ ಕುಡ್ಯಾಕ ಸುರುಮಾಡ್ದಾ. ಅಲ್ಲಿಂದ ಶನಿ ಈಕೀ ಸಂಸಾರದ ಬೆನ್ಬಿಡ್ದಂಗ ಕುತ್ಕಂಬುಡ್ತು. ಮೊದ್ಲಿಗೆ ಅವ್ರತಕ ಇವ್ರತಕ ಸಾಲ ಮಾಡ್ದಾ, ಆಮ್ಯಾಕ ಮಾಡ್ದಾ ಸಾಲ ತೀರ್ಸಕಾಗಲಾರ್ದೆ ಅವ್ರವ್ವ ಕೊಟ್ಟಿದ್ದ ಒಂದೆಕರೆ ಸವ್ಳು ಬೂಮಿನಾ ಬರೇ ಮೂವತ್ಸಾವರ್ಕ್ಕ ಮಾರ್ಬಿಟ್ಟ. ಮಾರಿದ ರೊಕ್ಕನ್ನೆಲ್ಲಾ ತನ್ತತಾಕಿಟು, ಅವ್ರತಕೀಟು ಇಟ್ಟು ದಿನಾ ಹಗ್ಲುರಾತ್ರಿ ಕುಡ್ದು ಕುಡ್ದು ಹಾಳ್ಮಾಡ್ಬಿಟ್ಟ. ಅದಾದ್ಮೇಲೆ ಮಾರೆಮ್ಮಗ ಅವ್ರಣ್ಣ ಮದ್ವ್ಯಾಗ ಕೊಟ್ಟಿದ್ದ ಕೆಟ್ಗುಂಡಾಲಿ ಆಲ್ಕೋಡ ಆಕ್ಳನ್ನಾ ಕೂಡ ಮಾದ್ರು ಈರಗ್ಗ ಬರೇ ಅನೆರ್ಡು ಸಾವರ್ಕ್ಕ ಕೊಟ್ಬುಟ್ಟ. ಆ ರೊಕ್ಕದಾಗ ಕೂಡ ಒಂದ್ರೂಪಾಯಿನೂ ಮನೆ ಕರ್ಚಿಗೆ ಕೊಡ್ಲಂಗ ಕಂಟ್ಪೂರ್ತಿ ಕುಡ್ದು ಕೆಡ್ಸಬುಟ್ಟ. ಇದೀಷ್ಟು ಸಾಲ್ದೆ ಬರ್ಬರ್ತ ಅವಾಗೀವಾಗ ಮನ್ಯಾಗ್ಳ ಒಂದೊಂದೇ ಸಾಮಾನು ಕೂಡ ಅತ್ನ ಕುಡುತ್ಕಾ ಮಾಯಾಗಾಕಾಚ್ಚಿದ್ವು. ಇದರಾಗ ವೋದ್ವಾರ ಮಗ್ಳಿಗೆ ತಡ್ಯಾಕಾಗ್ಲಾರ್ದಷ್ಟು ವೊಟ್ನ್ಯಾವಾಗಿತ್ತು, ಆಗ್ಲೂ ಗಂಡಂಬೋನು ಆಕಿ ಕಡೆ ಕಣ್ಣಾಕೀನೂ ನೋಡಲಿಲ್ಲಾಸಾಮಿ. ಆಗ್ಲೂ ಮಗ್ಳ ತೋರ್ಸಾಕಂತ ಸೀರೆ ಅಂಚಿನ್ಯಾಗ ಕಟ್ಟಿಗಂಡಿದ್ದ ನೂರ್ರೂಪಾಯಿ ನೋಟ್ನೂ ಮೂಕ ಕಿತ್ಕೊಂಡೋಗಿದ್ದ. ಆಗ್ಯಾಂಗೋ ಮಾಡಿ ಮಾರೆಮ್ಮ, ಬೀರಳ್ಳಿ ಡಾಕ್ಟ್ರು ಕೈ ಕಾಲಿಡ್ಕಂಡು ಮಗ್ಳಿಗೆ ತೋರ್ಸಿದ್ಲು.
ಈಗ ಉಳಿದಿದ್ದೇ ಬಂಗಾರದ ಒಂದ್ಬಟ್ಟು ತಾಳಿ. ಪಾಪ ಆ ತಾಳಿನಾ ವೋದ್ವರ್ಷ ಗೌಡ್ರವಲದಾಗ ಕತ್ತಿ ದುಡ್ದಂಗ ದುಡ್ದಿದ್ಕ ತನ್ಕೂಲಿಗೆ, ಅವ್ರ ಕೈಯಿಂದ ಸ್ವಲ್ಪಾಕಿ ತಾಳಿ ಮಾಡ್ಸಿ, ” ಪೇ ಮಾರೆಮ್ಮ ಇದ್ನಾದ್ರೂ,ನಿನ್ಗಂಡಗ್ಗ ಕಾಣ್ದಂಗ ನೆಟ್ಗಿಟ್ಕಾ.ನಾಳೆ ನಿನ್ಮಗಳ ಲಗ್ನದಾಗ ಯಾವ್ದಕಾದ್ರೂ ಬರ್ತಾತ” ಅಂದಿದ್ರು. ಅದ್ರಂಗನೇ ಆಕೀನೂ ಮಗ್ಳ ಮದ್ವೆ ಕನಸ್ಕಟ್ಗಂಡಿದ್ಲು. ಈಗ ನೋಡಿದ್ರೆ ಅದ್ಕೂ ಕಲ್ಲಾಕ್ಹೋದ. ವೋದೋನ್ ದಾರಿನೇ ನೋಡಿ ಬಿಕ್ಕಿ ಬಿಕ್ಕಿ ಅತ್ಕಂಡು ಆಮ್ಯಾಕ ಇದ್ದ ಒಬ್ಮಗಳ ಮಕ ನೋಡಿ ಕಣ್ಕಿಟಿಕ್ಯಾಗ ಇಣಿಕಾಗಿದ್ದ ಕಣ್ಣಿರ್ನ ಒರ್ಸಿಕೆಂತ “ಬಾ ಪೇ ಈ ಸನ್ನಿಸೋನ್ತಂಕ ಇದ್ರೆ ನಾಬ್ರಿನ್ನಾ ಕೂಡ ಮಾರಿ ಸಾರಾಯಿ ಕುಡ್ದಂಗ ನಮ್ನತ್ರ ಕುಡ್ಬುಡ್ತಾನ ಅದ್ಕ,ಈ ಊರ್ಬುಟ್ಟು ಎಲ್ಯಾದ್ರೂ ದೇಸಾಂತ್ರ ಓಗೋನ ಬಾ” ಅಂತೇಳಿ ಗಂಟು ಮೂಟೆ ಕಡ್ಗಂಡು ಮಗ್ಳ ಕೈಯಿಡ್ಕಂಡು ಕೊಚ್ಚಿಂತೆ ದಾರಿಯಿಡಿದು ಶರಬಣ್ಣ ತಾತನ ಮಠ ದಾಟಿದ್ಲೂ. ಆದ್ರ ಬಿಟ್ರೂ ಬಿಡ್ದು ಮಾಯೆ ಅಂಬೋತರ ಲಸುಮನ ಮಗ ಕೆಂಚ ‘ಅತ್ತೆಮ್ಮsss ಓ ಮಾರೆಮ್ಮತ್ತೆಮ್ಮsss’ ಅಂತಾ ಕೂಗ್ತಾ ಓಡೋಡಿ ಬಂದ.
ಬಂದೋನ್ಗೇ “ಅಯ್ಯ ನಿನ್ಮನೆ ಆಳಗೋಗಾ ಅಂಗ್ಯಾಕ ಕೂಗ್ಯಂತ ಬಂದಿ” ಅಂತಾ ಮಾರೆಮ್ಮ ಕೇಳಿದ್ಲು. ಅದ್ಕ ಕೆಂಚ “ಅತ್ತೆಮ, ಅಗಸೆ ಮುಂದೆ ಪ್ರಕಾಸಗೌಡ್ರು ಹೊಟ್ಲತಕ ಮಾಮ ಜಗ್ಗಿ ಕುಡ್ಕಂಡ ಎಚ್ರತಪ್ಪಿ ಬಿದ್ದನ, ಎಷ್ಟೆಬ್ಸುದ್ರು ಎದ್ದೆಳ್ವಲ್ಲ.ಅದ್ಕ ನಮ್ಮಪ್ಪ ನಿನ್ಕರ್ಕಂಡ ಬಾ ಅಂದ” ಅಂತಾ ಓಡ್ಕಂಡ ಬಂದ ಉಸ್ರಲ್ಲೇ ಕೆಂಚ ಉಸ್ರಿದ. ಆದ್ರ ಮಾರೆಮ್ಮ ಈಗಾಗ್ಲೇ ಊರ್ಬುಟ್ಟುಗೋಕೆ ನಿಚ್ಚಯ ಮಾಡ್ಕಂಡಿದ್ದರಿಂದ ಸಿಟ್ಟಿನ್ಯಾಗ “ವೋಗಿ ನಿಮ್ಮಪ್ಪಗ ಯೇಳು ಅತ್ಗ ಕುಡೇದ ಕಲ್ಸಿದ್ನೀನೆ ಅದ್ಕ ಈಗ ಅತ್ನ ನೀನೆ ನೋಡ್ಕೆಂಬಕಂತೆ, ನಾವೂರ್ಬುಟ್ಟು ಬದ್ಕಾಕಂತ ವೋತಿತೀದಿವಿ ಅಂತೇಳು” ಅಂತೇಳಿ ಮುಂದೆ ನಾಕೆಜ್ಜೆ ಇಟ್ಲು.
ಆಗ ಕಟ್ಟೆಪ್ಪನ ಮಂತ್ಯಾಕಲ್ಲಿದ್ದ ಒಡಿಕ್ಯಾಂತ ಲೋಸುಮ ಬಂದು ” ಪೇ ಮಾರೆಮ್ಮ ನಂದು ತಪ್ಪಾತಪೇ ನಿನ್ಗಂಡ ಎಚ್ರ ತಪ್ಪ್ಯಾನ ಚುಟುಗಿಟ್ರೂ, ತಣ್ಣಿರಾಕಿದ್ರೂ, ಬಾಯಾಗ ಮಜ್ಗೆ ಆಕಿದ್ರೂ ಎದ್ದೇಳುವಲ್ಲ. ಬಾ ಪೇ ಅಲ್ಲಿದ್ದೋರಲ್ಲ ಮೂಕ ಸತ್ತೋಗ್ಯಾನ ಅಂಬಾಕತ್ಯಾರ. ನಿನ್ಕೈ ಮೂಗಿತೀನಿ ಬಾ ಪೇ” ಅಂತ ಅಂದ್ಕೂಡ್ಲೇ ಮಾರೆಮ್ಮ ಅಣೆ ಅಣೆ ಬಡ್ಕಂತ “ಆಳ್ಮಾಡ್ಬಿಟ್ಯಾಲ್ಲೋ ಲೋಸುಮ, ನನ್ಗಂಡನ ಕೊಲ್ಬಿಟ್ಯಾಲ್ಲೋ” ಅಂತೇಳ್ತಾ ಓಡಿಕ್ಯಾಂತ ಪ್ರಕಾಸಗೌಡ್ರು ಹೊಟ್ಲತಕ ಬಂದ್ಲು.ಅಕಿ ಬರತಟಿಗೆಲ್ಲ ಜಗ್ಗಿ ಮಂದಿ ಸೇರಿದ್ರು, ಯಾವಾಗ ಅತ್ಗಂತ ಮಾರೆಮ್ಮ ಓಡಿ ಬಂದ್ಲೋ ಆಗ ಒಬ್ಬೊಬ್ರೇ ಸರ್ಕಂಡ್ರು. ಮಾರೆಮ್ಮ ಬಂದ್ಕೂಡ್ಲೇ ಗಂಡನ್ನ ತೆಕ್ಬಡ್ಕಂಡು “ಆಳ್ಮಾಡ್ಬುಟ್ಯಾಲ್ಲೋ ಮಾದ್ಗ್ಯಾss, ಇನ್ನಾ ನಮ್ಯಾಗ್ಯಾರೋ ದಿಕ್ಕುss. ಎಲ್ಲಾ ನನ್ನಾಟಗ್ಯಾರು ಸೇರಿ ಬಂಗಾರದಂಗಿದ್ದ ನಿನ್ಗೆ ಕುಡಿದ್ಕಲ್ಸಿ ನಿನ್ಕೊಲ್ಲಿಬಿಟ್ರಲ್ಲೋss ಯಪ್ಪಾss.ಯಮ್ಮೋss ಮನ್ಯಾಗಳ್ದಲ್ಲಾ ಗುಡ್ಸಿ ಗುಂಡಾಂತ್ರ ಮಾಡಿದ್ರೂ ಸುಮ್ನಿದ್ಲೋ ಯಪ್ಪಾ, ಯಪ್ಪೋss ಇದ್ದೊಬ್ಬ ಮಗ್ಳನ ನೊಡನೀರಿನ್ಯಾಗ ಕೈ ಬುಟ್ಹೋದ್ಯಲ್ಲ ಯಮ್ಮಾ” ಅಂತಾ ಅಳ್ತೀರಬೇಕಾದ್ರೆ ಮಾದ್ರನಿಂಗಿ ಮಾರೆಮ್ಮನ್ನ ಎದೆಮ್ಯಾಕ ಅಕ್ಕೆಂಡು “ಇರ್ಲಿ ಬಿಡಪೇ ನಿನ್ಪಡ್ಕಂಡ ಬಂದದ್ದಿಷ್ಟೇ, ಅವ್ನಾರು ಏನ ಮಾಡ್ಯಾನ. ನೋಡಲ್ಲಿ ನಿನ್ಮಗ್ಳು ದಿಗ್ಲ ಬಿದ್ದಾಳ. ಅಳ್ಬ್ಯಾಡ ಸುಮ್ನೀರು ಯಾರೇನ್ಮಾಡಗುತ್ತೇ, ಆ ಸಿವ ಯಂಗ್ದಾರಿ ತೋರ್ಸುತ್ತಾನ ಅಂಗೋಗ್ಬೇಕು ಅಷ್ಟೇ” ಅಂತಾ ಸಮಾದಾನ ಮಾಡ್ತಿದ್ಲು.
ಅಲ್ಲಿಗೆ ಸುಮ್ನಾಗಾದ ಮಾರೆಮ್ಮ ಹರಿದ ಸೆರಗಿನಲ್ಲೇ ಮೂಗಿನ್ಯಾಗಿನಿಂದ ಬರ್ತಿದ್ದ ನೀರ್ಸಿಂಬ್ಳನ್ನಾ ಇಂಡ್ಕೆಂಡು, ಎದೆ ಎದೆ ಬಡ್ಕಂತ “ಯಮ್ಮೊss ಯಪ್ಪಾss ಮುಂದೆ ನನ್ಮಗ್ಳ ಜೀವ್ನ ಯಂಗ್ಮಾಡ್ಲೋ ಯಪ್ಪಾss. ಯಪ್ಪೋss ದೇವ್ರಂಬೋನು ಕಣ್ಮುಚ್ಕಂಡು ಕುಂತಾನೋ ಯಮ್ಮss.ಇಲ್ದಿದ್ರೆ ನಮ್ಮಾದ್ಗ್ಯಾ ಅತನ ಅಂಗ್ಳಾದಾಗ ಸಾಯಿತಿದ್ದಿಲ್ಲ ಯಮ್ಮಾ” ಇಂಗೆ ಆಕೀಯ ಗೋಳಿನ್ಯಾಗೇ ಅವ್ರ ಮೂಕನ ಹೆಣ ಮತ್ತು ಮಾರೆಮ್ಮನ ಕನ್ಸು ಸುಡುಗಾಡ್ಯಾಗ ಎಲ್ರೂ ಸೇರಿ ಮಣ್ಮಾಡಿ ಮನಿಗೆ ಬಂದ್ರು