ಅಂಕೋಲಾ:- ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯೂ ಇಂದು ಅಂಕೋಲಾ ನಗರವನ್ನು ತಲುಪಿದ್ದು, ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ ,ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಮೊಮ್ಮಗನಂತೆ ಮುದ್ದು ಮಾಡಿ ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದ್ದಾರೆ.
ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯ ಆರನೇ ದಿನವಾದ ಇಂದು ಅಂಕೋಲಾ ನಗರವನ್ನು ಪ್ರವೇಶಿಸಿದ್ದು, ಪಾದಯಾತ್ರೆಗೆ ಬೆಂಬಲ ನೀಡಲು ಬಂದ ಪದ್ಮಶ್ರೀ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಅನಂತಮೂರ್ತಿ ಅವರನ್ನು ಮೊಮ್ಮಗನಂತೆ ಮುತ್ತು ನೀಡಿ ಮುದ್ದು ಮಾಡಿ, ಅವರಿಗೆ ನಿಮ್ಮ ಈ ಹೋರಾಟ ಜಯವಾಗಲಿ, ನೀನು ಜಯಶಾಲಿಯಾಗು ಎಂದು ಹೇಳಿ ಆಶೀರ್ವದಿಸಿ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನಂತಮೂರ್ತಿ ಹೆಗಡೆ ಅವರು ಶಿರಸಿಯಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ಕೂಡಲೇ ಆಸ್ಪತ್ರೆ ಆಗಬೇಕು, ನಾನು ಮೋದಿಯವರಿಗೆ ಅಗ್ರಹಿಸುತ್ತೇನೆ. ಜಿಲ್ಲೆಯ ನಮ್ಮ ಮಕ್ಕಳು ( ಜನರು) ಬೇಜಾರಾಗಿದ್ದಾರೆ. ಇಲ್ಲಿ ದೇವರ ಅನುಗ್ರಹದಿಂದ ಒಂದು ಆಸ್ಪತ್ರೆಯಾದರೆ ಎಲ್ಲರಿಗೂ ಅನೂಕೂಲವಾಗುತ್ತದೆ ಎಂದರು.
ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಜ್ಜಿ ಅವರನ್ನು ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ ನಮಸ್ಕರಿಸಿ, ಅವರನ್ನು ಸನ್ಮಾನಿಸಿದರು ನಿಮ್ಮ ಈ ಬೆಂಬಲಕ್ಕೆ ನಾನೆಂದು ಚಿರಋ ಣಿಯಾಗಿರುತ್ತೇನೆ. ಮೋದಿ ಅವರಂತೆ ನನಗೂ ನಿಮ್ಮ ಆಶೀರ್ವಾದ ಇರಲಿ ಎಂದು ನಮಸ್ಕರಿಸಿದರು. ಪಾದಯಾತ್ರೆಯೂ ಅಂಕೋಲಾ ಮೂಲಕ ಇಂದು ಕಾರವಾರ ತಾಲೂಕಿನ ಅಮದಳ್ಳಿ ತಲುಪಲಿದೆ.