ಈ ವರ್ಷ ಬರಗಾಲ ಪರಿಸ್ಥಿತಿ ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಕುಡಿಯುವ ನೀರು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿ, ಕೆಲಸಗಳಿಗೆ ಆದ್ಯತೆ ನೀಡುವಂತೆ ಆದೇಶಿಸಿದರು. ಸಿದ್ಧಾಪುರ ತಹಸಿಲ್ಧಾರರ ಕಛೇರಿಯ ಸಭಾಭವನದಲ್ಲಿ ನಡೆದ ಬರ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಪ್ರದೇಶ,ಗ್ರಾಮೀಣ ಪ್ರದೇಶ, ವಸತಿಶಾಲೆಗಳು,ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಮುನ್ನೆಚ್ಚರಿಕೆ ವಹಿಸುವ ಭಾಗವಾಗಿ ನೀರಿನ ಮೂಲ, ಲಭ್ಯತೆಯ ಸಾಧ್ಯತೆ, ಉಪಕ್ರಮಗಳ ಬಗ್ಗೆ ಆದ್ಯತೆಯ ಮೇರೆಗೆ ಸಿದ್ಧರಾಗಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಮತ್ತು ನೀರಿನ ಪೂರೈಕೆ ಮತ್ತು ಕಾಮಗಾರಿ ನಿರ್ವಹಿಸುವವರೆಲ್ಲರೂ ತಕ್ಷಣ ತಮ್ಮ ವ್ಯಾಪ್ತಿಯ ಕೆಲಸಗಳನ್ನು ನಿರ್ವಹಿಸಿ ಸಂಬಂಧಿಸಿದವರೊಂದಿಗೆ ಸಮನ್ವಯದೊಂದಿಗೆ ಬರಲಿರುವ ಪರಿಸ್ಥಿತಿ ಎದುರಿಸಲು ತಯಾರಾಗಬೇಕು. ತಾಲೂಕಿನಲ್ಲಿ ಜನರ ಕುಡಿಯುವ ನೀರು ಮತ್ತು ಬಳಕೆಗೆ ಸಂಬಂಧಿಸಿದ ಅನುಕೂಲ ಮಾಡಿಕೊಡಲು ಸಮರೋಪಾದಿಯಲ್ಲಿ ಕೆಲಸಮಾಡಬೇಕೆಂದು ತಾಕೀತು ಮಾಡಿದರು.
ರೈತರಿಗೆ ಮೇವಿನ ಬೀಜ ವಿತರಿಸಿ ಮಾತನಾಡಿದ ಅವರು ಬೆಳೆ, ಜಾನುವಾರುಗಳು, ಕೃಷಿ ಸಂಬಂಧಿ ಅಗತ್ಯಗಳ ಜೊತೆಗೆ ನೀರಿಗೆ ಆದ್ಯತೆ ನೀಡಬೇಕು. ನೀರಿನ ಲಭ್ಯತೆ, ಸಾಧ್ಯತೆಗಳನ್ನು ನೋಡಿ ಕೃಷಿ ಚಟುವಟಿಕೆ ನಡೆಸುವಂತೆ ರೈತರನ್ನು ಮನ ಒಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಮೂಲಗಳನ್ನು ಶೋಧಿಸಿ ಅಗತ್ಯ ಕೆಲಸಗಳ ಪಟ್ಟಿ ಮಾಡಲು ೧೫ ದಿನಗಳ ಕಾಲಮಿತಿಯ ಗಡುವು ನೀಡಿದರು.ತಹಸಿಲ್ಧಾರ ಎಂ.ಆರ್. ಕುಲಕರ್ಣಿ, ಎ.ಸಿ.ಎಫ್. ಬಾಸೂರು, ತಾ.ಪಂ. ಕಾ.ನಿ.ಅ. ದೇವರಾಜ್ ಹಿತ್ತಲಕೊಪ್ಪ ಸೇರಿ ಎಲ್ಲಾ ಇಲಾಖೆಗಳ ಬಹುತೇಕ ಅಧಿಕಾರಿಗಳು ಉಪಸ್ಥಿತರಿದ್ದರು.