ಕೃಷಿ ಲಾಭದಾಯಕವಲ್ಲ ಎನ್ನುವುದು ಸಾಮಾನ್ಯ ಗೃಹಿಕೆ. ಆದರೆ ಜನಸಾಮಾನ್ಯರ ಈ ಅನುಭವವನ್ನು ಸುಳ್ಳು ಮಾಡಿದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲ್ಲಪ್ಪ ನಾಯ್ಕ ಕಲಕರಡಿ. ತಮಗಿದ್ದ ಮೂಲ ೬ ಎಕರೆ ಬರಡು ಭೂಮಿಯಲ್ಲಿ ಏನು ಮಾಡಲು ಸಾಧ್ಯ ಎಂದು ಯೋಚಿಸಿದ ಯುವಕ ಕಲ್ಲಪ್ಪ ನಾಯ್ಕ ಕಲಕರಡಿ ಹೊಟ್ಟೆಪಾಡಿನ ದುಡಿಮೆಗೆ ಬೆಂಗಳೂರಿನ ದಾರಿ ಹಿಡಿಯುವ ಯೋಚನೆ ಮಾಡಿದ್ದರು.ತಾನೊಂದು ಬಗೆದರೆ ವಿಧಿ ಮತ್ತೊಂದು ಬಗೆಯಿತು ಎನ್ನುವಂತೆ ಬೆಂಗಳೂರಿಗೆ ಗೋಗುವ ಯೋಚನೆ ಕೈಬಿಟ್ಟ ಕಲ್ಲಪ್ಪ ತನ್ನ ಭೂಮಿಜೊತೆ ಮತ್ತಷ್ಟು ಎಕರೆಭೂಮಿಯನ್ನು ಲೀಜ್ ಪಡೆದರು. ಭತ್ತ,ನಂತರ ಕಬ್ಬು ಶುಂಠಿ,ಮಾವು,ನೆಲ್ಲಿ ಬಾಳೆ ಬೆಳೆಯುತ್ತಾ ಪ್ರತಿವರ್ಷ ಮಾಡಿದ ಉಳಿತಾಯದಿಂದ ಹೊಸ ಭೂಮಿ ಖರೀದಿಸುತ್ತಾ ಸಾಗಿದರು. ೬ ಎಕರೆ ಒಣ ಭೂಮಿಯಿಂದ ಪ್ರಾರಂಭವಾದ ಇವರ ಜರ್ನಿ ಈಗ ಅರವತ್ತು ಎಕರೆ ಸ್ವಂತ ಭೂಮಿಗೆ ಬಂದು ಮುಟ್ಟಿದೆ.
೬೦ ಎಕರೆಯಲ್ಲಿ ಬಹುತೇಕ ೪೦ ಎಕರೆಅಡಿಕೆ ಬೆಳೆಯುತ್ತಿರುವ ಇವರು ಅಲ್ಪಸ್ವಲ್ಫ ಭತ್ತ,ಅನಾನಸ್ ಬೆಳೆಯುತಿದ್ದಾರೆ. ಕೃಷಿಯಲ್ಲಿ ಅಡಿಕೆಯಿಂದ ಮಾತ್ರ ಲಾಭ ಪಡೆಯಬಹುದು ಎನ್ನುವ ಕಲ್ಲಪ್ಪ ತಮ್ಮ ೪೦ ವರ್ಷಗಳ ಪಯಣದಲ್ಲಿ ಕೃಷಿಯೊಂದಿಗೆ ವ್ಯಾಪಾರ ಮಾಡಿದ್ದಾರೆ, ಅನಾನಸ್ ಬೆಳೆದು ಉತ್ತರ ಭಾರತದ ವರೆಗೆ ಮಾರುಕಟ್ಟೆ ಹುಡುಕಿ ಅಲೆದಿದ್ದಾರೆ.
ಹೆಚ್ಚು ಶಿಕ್ಷಿತರಲ್ಲದ ಕಲ್ಲಪ್ಪ ನಾಯ್ಕ ಹಿತೈಶಿಗಳು, ಪರಿಚಿತರ ಸಹಕಾರ ಪಡೆದು ಅವಿಭಕ್ತ ಕುಟುಂಬದ ಜವಾಬ್ಧಾರಿ ಹೊರುತ್ತಲೇ ಕೃಷಿ ಸಾಧಕರೆನಿಸಿದ್ದಾರೆ. ಯಾವುದೇ ಕೆಲಸವನ್ನು ಶೃದ್ಧೆ, ತಾಳ್ಮೆ, ಆಸಕ್ತಿಯಿಂದ ಮಾಡಿದರೆ ಗೆಲುವು ಸಿಗುತ್ತದೆ ಎನ್ನುವ ನಾಯ್ಕರ ತೋಟದಲ್ಲಿ ಈಗ ತೆಂಗು,ಬಾಳೆ ಅಡಿಕೆಗಳು ಹಸಿರು ಉಕ್ಕಿಸುತ್ತಿವೆ.
ಅಡಿಕೆ ತೋಟಗಳೇ ಅಪರೂಪವಾಗಿದ್ದ ಬನವಾಸಿ ಭಾಗದಲ್ಲಿ ಅಡಿಕೆ,ಬಾಳೆ,ತೆಂಗು ಬೆಳೆದ ಕಲ್ಲಪ್ಪ ನಾಯ್ಕ ಅರೆಬಯಲುಸೀಮೆಯಲ್ಲಿ ವ್ಯವಸಾಯದಲ್ಲಿ ಹೆಸರು ಮಾಡಿ ಮಿಶ್ರಬೆಳೆ ಬೆಳೆಯುವ ಮಾದರಿ ಕೃಷಿಕರಾಗಿ ಹೆಸರುಮಾಡಿದ್ದಾರೆ.