ಸಿದ್ದಾಪುರ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪನೆಯಾಗಿ 75 ವರ್ಷ ಗಳಾದ ಹಿನ್ನೆಲೆಯಲ್ಲಿ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಡಿಸೆಂಬರ 10 ರಂದು ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದ್ದು, ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಿದ್ದಾಪುರ ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಕರೆ ನೀಡಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಈಡಿಗರ ಸಂಘಕ್ಕೆ 75 ವರ್ಷ ಸಂದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಮತ್ತು ಸಮಾಜದ ಬೃಹತ್ ಜಾಗೃತ ಸಮಾವೇಶ ಅದ್ಧೂರಿಯಾಗಿ ನಡೆಯಲಿದೆ. ಸಮಾಜದ ಸ್ವಾಮೀಜಿಗಳ ಸಾನಿಧ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಖ್ಯಾತ ಚಲನಚಿತ್ರ ನಟ ಡಾ. ಶಿವರಾಜಕುಮಾರ, ಸಚಿವ ಮಧು ಬಂಗಾರಪ್ಪ, ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ಹಾಲಿ ಹಾಗೂ ಮಾಜಿ ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಿದ್ದಾಪುರ ತಾಲೂಕಿನ ಸಮಾಜ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಸಹಕಾರದಲ್ಲಿ
ಪ್ರತಿ ಪಂಚಾಯ್ತಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಸಮುದಾಯದ ಎಲ್ಲಾ ನಾಯಕರು ತಮ್ಮ ಸ್ವಂತ ವಾಹನವಿದ್ದರೆ ಅವರ ವಾಹನದಲ್ಲಿ ಜನರನ್ನು ಕರೆದೊಯ್ಯುವುದು. ವಾಹನ ವ್ಯವಸ್ಥೆ ಇಲ್ಲದವರು ಬಸ್ಸಿನಲ್ಲಿ ಪ್ರಯಾಣಿಸಬಹುದು. ಶನಿವಾರ ರಾತ್ರಿ 7 ಗಂಟೆಗೆ ಎಲ್ಲಾ ಬಸ್ಸುಗಳು ಅಯಾ ಪ್ರದೇಶದಿಂದ ಹೊರಡಲಿದ್ದು, ಕುಲಬಾಂಧವರು ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸುವಂತೆ ಕರೆ ನೀಡಿದರು.
ಈ ವೇಳೆ ಸಂಘದ ತಾಲೂಕಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾಯ್ಕ, ಕಾರ್ಯದರ್ಶಿ ಪ್ರವೀಣ ನಾಯ್ಕ, ಸಮಾಜದ ಪ್ರಮುಖರಾದ ಆನಂದ ನಾಯ್ಕ, ವೀರಭದ್ರ ನಾಯ್ಕ, ಕೆ.ಆರ್.ವಿನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.