


ಸಿದ್ದಾಪುರ: ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಶಿರಸಿ ಹಾಗೂ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಿದ್ದಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.
ಪಟ್ಟಣದ ಸಿದ್ದಿವಿನಾಯಕ ವಿದ್ಯಾ ಸಮುಚ್ಚಯದಲ್ಲಿ ನಡೆದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕರ್ನಾಟಕದಲ್ಲಿ ಕಳೆದ 21 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವುದು ಅಭಿನಂದನಾರ್ಹ. ಮಗುವಿನ ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರದಲ್ಲಿ ಪಾಲಕರು ಪ್ರೋತ್ಸಾಹ ನೀಡಬೇಕು. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಬೇಕು. ಪ್ರತಿಭಾ ಕಾರಂಜಿಗೆ ಕರ್ನಾಟಕ ಸರ್ಕಾರ ತುಂಬಾ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುತ್ತಿದೆ. ಪ್ರತಿಭೆಗಳನ್ನು ಗುರುತಿಸುವಲ್ಲಿ ಪೋಷಕರು ಹಾಗೂ ಸಮಾಜ ಮುಂದಾಗಬೇಕು ಎಂದರು.
ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ತೋರಿ ತಾಲೂಕು ಹಾಗೂ ಶೈಕ್ಷಣಿಕ ಜಿಲ್ಲೆಯ ಕೀರ್ತಿ ಬೆಳಗಿದ ಸಿದ್ದಾಪುರ ತಾಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆ ಧನ್ಯ ಚಂದ್ರಶೇಖರ ನಾಯ್ಕ, ಹುಲ್ಕುತ್ರಿ ಶಾಲೆಯ ಕೀರ್ತಿ ಮಂಜುನಾಥ ಗೌಡ ರನ್ನು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ವೇದಿಕೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಿದ್ದಾಪುರ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ಡಿಡಿಪಿಐ ಪಿ. ಬಸವರಾಜ, ಸಿದ್ದಾಪುರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ, ಶಿರಸಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಮುಂಡಗೋಡ ಬಿಇಓ ಜಕಣಾಚಾರಿ, ಶಿಕ್ಷಣಾಧಿಕಾರಿಗಳಾದ ಎಂ.ಎಚ್.ನಾಯ್ಕ, ಸದಾನಂದ ಸ್ವಾಮಿ, ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ, ಸಿದ್ದಾಪುರ ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ಭಾಶಿ, ಪ್ರತಿಭಾ ಕಾರಂಜಿ ನೊಡೆಲ್ ಅಧಿಕಾರಿ ಎಂ.ಕೆ.ಮೊಗೇರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ನಾರಾಯಣ ನಾಯಕ, ಅಜಯ ನಾಯ್ಕ, ನಾರಾಯಣ ದೈಮನೆ, ಲೋಕೇಶ ನಾಯ್ಕ, ಆರ್.ಆರ್.ನಾಯ್ಕ, ಸತೀಶ ಹೆಗಡೆ, ಯಶವಂತ ನಾಯ್ಕ, ಸುರೇಶ ಪಟಗಾರ, ಬಾಲಚಂದ್ರ ಪಟಗಾರ, ಗುರುರಾಜ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ ಸ್ವಾಗತಿಸಿದರು. ಸಿದ್ದಾಪುರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ವಂದಿಸಿದರು.
