………………
ಸಪ್ತಸಾಗರದಾಚೆ
ಘಟಾನುಘಟಿ ಜಗಜಟ್ಟಿಗಳ
ಸದಾ ವತ್ಸಲೆಯ ಕೊರಳಿಗೆ
ವಿಜಯದ ಪದಕ ತೊಡಿಸಬಹುದು
ಗೆಳತಿ, ನಿನ್ನಂಥ
ಬೆಂಕಿಯಲ್ಲಿ ಹೂಗಳಿಗೆ
ಅದೇನು ದೊಡ್ಡದಲ್ಲ!
ಆದರೆ, ಸದಾ ವತ್ಸಲೆಯ
ಮಂತ್ರ ಪಠಿಸುವ
ನಯವಂಚಕ ಖೂಳ ಪಡೆ
ಮುಂದೆ ಮಾನ-ಸಮ್ಮಾನಕ್ಕಾಗಿ
ಸೆಣಸುವುದು ಸವಾಲು…
ದೇಶಭಕ್ತನ ಮುಖಕ್ಕೆ
ಹಿಡಿದ ಆ ಒಂದು
ಜೊತೆ ಬೂಟು ಮತ್ತು ನಾಲ್ಕು
ಹನಿ ಕಣ್ಣೀರು;
ಇವರ ಭವ್ಯ ಇತಿಹಾಸದ
ಪುಟಗಳಿಗೆ ಬಡಿದ ಅಳಿಸಲಾರದ ಮಸಿ.
ಹೆಣ್ಣ ಪೂಜಿಸುವ
ಸೋಗಲಾಡಿ ಪರಂಪರೆಗೆ,
ಬನಾನ ರಿಪಬ್ಲಿಕ್ಕಿಗೆ,
ಹಲ್ಲಿಲ್ಲದ ಕಾನೂನಿಗೆ,
ಕೊನೆಗೆ ಈ ನೆಲದ
ಎಲ್ಲರ ಎದೆಗೆ ಬಡಿದ ಮೊಳೆಗಳು;
ಬಿಚ್ಚಿಟ್ಟ ಆ ಜೋಡಿ ಬೂಟು
ಮತ್ತು
ದೇಶದ ಸತ್ತ ಆತ್ಮಸಾಕ್ಷಿಗೆ ಜಾರಿದ
ಸಂತಾಪದ ಆ ನಾಲ್ಕು ಕಣ್ಣ ಹನಿ!
~ಶಶಿ ಸಂಪಳ್ಳಿ