ರಾಜ್ಯ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವಿರುದ್ಧ ಸಂಸದ ಅನಂತಕುಮಾರ ತೊಡೆ ತಟ್ಟುತ್ತಿರುವ ವಿಷಯ ಈಗ ಚರ್ಚೆಯಾಗುತ್ತಿದೆ.
ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಮತ್ತು ಮಾಜಿ ಸಚಿವ ವಿಶ್ವೇಶ್ವರ ಹೆಗಡೆಯವರ ರಾಜಕೀಯ ವಿರಸ,ವಿವಾದ ಇಂದು ನಿನ್ನೆಯದಲ್ಲ. ಈಗ ರಾಜ್ಯ ಬಿ.ಜೆ.ಪಿ. ಮತ್ತು ಆರೆಸ್ಸೆಸ್ ವಲಯಗಳಲ್ಲಿ ಪ್ರಭಾವಿ ಎನ್ನಲಾಗುವ ವಿಶ್ವೇಶ್ವರ ಹೆಗಡೆ ಮತ್ತು ರಾಜ್ಯ ಬಿ.ಜೆ.ಪಿ. ದೂರ ಇಟ್ಟಿದ್ದ ಅನಂತಕುಮಾರ ನಡುವಿನ ಶೀತಲ ಸಮರ ತಾರಕಕ್ಕೇರಿದಂತಿದೆ.
ಹಿಂದುತ್ವದ ಹೆಸರಿನಲ್ಲಿ ಸುಳ್ಳು ಲೆಕ್ಕಾಚಾರ ಕೊಟ್ಟು ಉತ್ತರ ಕನ್ನಡ ಜಿಲ್ಲೆಯ ಮತದಾರರನ್ನು ಮತ್ತು ರಾಜ್ಯ ಬಿ.ಜೆ.ಪಿ. ವರಿಷ್ಠರನ್ನು ದಿಕ್ಕುತಪ್ಪಿಸಿ ಸಂಘದ ಜಾತಿ ಲಾಬಿಯ ಮೂಲಕ ಟಿಕೇಟ್ ಕಬಳಿಸುತಿದ್ದ ಸಂಸದ ಅನಂತಕುಮಾರ ಹೆಗಡೆ ಮತ್ತು ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಮೊದಮೊದಲು ನಾಯಕತ್ವ ಪಕ್ಷದ ಹಿಡಿತಕ್ಕಾಗಿ ಕಚ್ಚಾಡುತಿದ್ದರೆ ಈಗ ಸಂಸದ ಸ್ಥಾನದ ಬಿ.ಜೆ.ಪಿ. ಟಿಕೇಟ್ ಗಾಗಿ ಪೈಪೋಟಿ ನಡೆಸುತ್ತಿರುವ ವಿಚಾರ ಬಹಿರಂಗ ಗುಟ್ಟು.
ಈ ಅವಕಾಶ, ಅಧಿಕಾರದ ಮೇಲಾಟದ ಗುಪ್ತ ಕಾಳಗದಲ್ಲಿ ಇತರರು ದಾಳಗಳಾಗುತಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಅಪಮಾನ ಮಾಡಿದರು, ಮಾನಹಾನಿ ಮಾಡಿದರು ಎನ್ನುವ ಕಾರಣಕ್ಕೆ ಸಿದ್ಧಾಪುರದ ತಾಲೂಕಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಗೌಡರ್ ರನ್ನು ಪಕ್ಷದಿಂದ ಉಚ್ಚಾಟಿಸಿದ್ದ ಕಾಗೇರಿ ಹೆಗಡೆ ಬಣ ಹರೀಶ್ ಗೌಡರ್ ಮೇಲೆ ಎರಡ್ಮೂರು ಪ್ರಕರಣ ದಾಖಲಿಸಿ ಜೈಲಿಗೂ ಕಳಿಸಿತ್ತು.!
ಅಧಿಕಾರ,ಅನುಕೂಲ ಇರುವ ವಿಶ್ವೇಶ್ವರ ಹೆಗಡೆಯವರ ಬಣಕ್ಕೆ ಟಾಂಗ್ ಕೊಟ್ಟಿದ್ದ ಹರೀಶ್ ಗೌಡರ್ ಹಿಂದಿನ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಬಿ.ಜೆ.ಪಿ. ತೊರೆದು ಜಾದಳ ಸೇರಿದ್ದರು.
ಈಗ ಜಾದಳ ಬಿ.ಜೆ.ಪಿ.ಯೊಂದಿಗೆ ವಿಲೀನವಾಗಿರುವುದರಿಂದ ಹರೀಶ್ ಗೌಡರ್ ಜಾದಳದಲ್ಲಿದ್ದೂ ಬಿ.ಜೆ.ಪಿ.ಯಲ್ಲಿದ್ದಂತೆ ಇರಬಹುದಿತ್ತು. ಆದರೆ ಅನಂತಕುಮಾರ್ ಹೆಗಡೆ ಮೂಲಕ ಮತ್ತೆ ಬಿ.ಜೆ.ಪಿ. ಸೇರ್ಪಡೆಯಾಗಿರುವ ಹರೀಶ್ ಗೌಡರ್ ಕಾಗೇರಿ ಬಣಕ್ಕೆ ಶಾಕ್ ನೀಡಿದ್ದಾರೆ.
ಅನಂತಕುಮಾರ ಹೆಗಡೆ ಕೂಡಾ ತನಗೆ ಟಿಕೇಟ್ ವಿಚಾರದಲ್ಲಿ ತೀವ್ರಪೈಪೋಟಿ ನೀಡುತ್ತಿರುವ ವಿಶ್ವೇಶ್ವರ ಹೆಗಡೆಯವರ ವಿರುದ್ಧ ತೊಡೆ ತಟ್ಟಿದ್ದು ʼನೀವು ಉಚ್ಛಾಟಿಸಿದವರನ್ನು ನಾವು ಮತ್ತೆ ಕರೆತಂದಿದ್ದೇವೆ” ಎಂದು ಟಿಕೇಟ್ ವಿಚಾರ ಅಷ್ಟೇ ಅಲ್ಲ ಎಲ್ಲಾ ವಿಚಾರದಲ್ಲೂ ನಾವು ನಿಮಗೆ ವಿರುದ್ಧ ಎಂದು ತೋರಿಸಿದ್ದಾರೆ.
ಬಿ.ಜೆ.ಪಿ.ಯಲ್ಲಿ ಉತ್ತರ ಕನ್ನಡ ಬಿ.ಜೆ.ಪಿ. ಟಿಕೇಟ್ ಗಾಗಿ ಸುನಿಲ್ ಹೆಗಡೆ, ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ನಡುವೆ ಪೈಪೋಟಿ ನಡೆಯುತ್ತಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಹುಸಂಖ್ಯಾತರಾದ ಮರಾಠಿ ಭಾಷಿಗರು ಮತ್ತು ದೀವರ ನಡುವೆ ಈ ಹೆಗಡೆಗಳು ಟಿಕೇಟ್ ಗಿಟ್ಟಿಸಿ ಹಿಂದುತ್ವದ ರಾಜಕಾರಣಕ್ಕೆ ಹೊಂಚು ಹಾಕಿದ್ದಾರೆ. ಇವರ ಒಳಜಗಳದಲ್ಲಿ ಕಾಂಗ್ರೆಸ್ ಬಹುಸಂಖ್ಯಾತರಿಗೆ ಟಿಕೇಟ್ ನೀಡಿ ಉತ್ತರ ಕನ್ನಡ ಲೋಕಸಭೆ ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿ ತೊಡಗಿದೆ. ಸಂಘನಿಷ್ಠ ಹೆಗಡೆಗಳ ಒಳಜಗಳ ಕಾಂಗ್ರೆಸ್ ಗೆ ವರವಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಳ ನಡುವೆ ಅನಂತಮೂರ್ತಿ ಹೆಗಡೆ ಬಿ.ಜೆ.ಪಿ. ಟಿಕೇಟ್ ತರುತ್ತಾರೆ ಎನ್ನುವ ಗುಲ್ಲು ಎದ್ದಿದೆ.