ಸಿದ್ದಾಪುರ
ಜೀವನದಲ್ಲಿ ಹೊಸ ಬೆಳಕನ್ನು ಕಾಣಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು. ದುಶ್ಚಟಗಳೇ ಕುಟುಂಬವನ್ನು ನಾಶಪಡಿಸುತ್ತದೆ. ಸಮಾಜದಲ್ಲಿ ಎಲ್ಲರಂತೆ ಉತ್ತಮ ವ್ಯಕ್ತಿ ಆಗಬೇಕಾದರೆ ಮದ್ಯಪಾನ ಮುಕ್ತ ಜೀವನ ನಡೆಸಬೇಕು ಎಂದು ಹೆಗ್ಗರಣಿ ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಧರೆ ಹೇಳಿದರು.
ತಾಲೂಕಿನ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅನ್ನಪೂರ್ಣ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ,ರಾಜ್ಯ ಮದ್ಯ ಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೇರೂರು ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ್ದ ೧೭೮೨ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಎಲ್ಲ ಯೋಜನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಮದ್ಯವರ್ಜನ ಶಿಬಿರ ನಡೆಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಮಾದರಿಯ ಕಾರ್ಯಕ್ರಮ ಎಂದು ಹೇಳಿದರು.
ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಮಾತನಾಡಿ ಸಮಾಜದಲ್ಲಿ ಎಲ್ಲರಂತೆ ಗೌರವದಿಂದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಮದ್ಯವರ್ಜನ ಶಿಬಿರಗಳು ಹೆಚ್ಚು ಪೂರಕ.ಇಂತಹ ಶಿಬಿರಗಳು ಸದಾಕಾಲ ಸ್ಮರಿಸುವಂತಹುದಾಗಿದೆ. ಜೀವನದಲ್ಲಿ ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ತಪ್ಪನ್ನು ತಿಳಿದೂ ಮಾಡುವುದು ಸರಿಯಲ್ಲ. ಸರ್ಕಾರದಿಂದ ಮಾಡಲಾಗದಂತಹ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿ ಮಾದರಿಯಾಗುತ್ತಿದೆ ಎಂದು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಮಾತನಾಡಿ ಶಿಬಿರದಿಂದ ಜೀವನದಲ್ಲಿ ಪರಿವರ್ತನೆ ಆಗುತ್ತದೆ. ಈ ಪರಿವರ್ತನೆಯ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಮಾದರಿಯ ಶಿಬಿರವನ್ನಾಗಿಸಬೇಕೆಂದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ ರಾಮ ಗೌಡ ಅಧ್ಯಕ್ಷತೆವಹಿಸಿದ್ದರು.ಹೆಗ್ಗರಣಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಚನ್ನಯ್ಯ, ತಂಡಾಗುಂಡಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಎಂ.ಗೌಡ, ನಿಲ್ಕುಂದ ಗ್ರಾಪಂ ಅಧ್ಯಕ್ಷ ರಾಜಾರಾಮ ಆರ್.ಹೆಗಡೆ, ಜನವಿಕಾಸ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಹಾಸ್ಯಗಾರ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ಗೌರಿ ನಾಯ್ಕ, ಸದಸ್ಯರಾದ ವಿವೇಕಾನಂದ ರಾಯ್ಕರ್, ಲಕ್ಷಿö್ಮÃ ರಾಜ, ರಮೇಶ ಹೆಗಡೆ ಹಾರ್ಸಿಮನೆ, ಸುಭಾಸ ನಾಯ್ಕ ಕಾನಸೂರು, ಯೋಗ ಶಿಕ್ಷಕ ಗಣಪತಿ ಹೆಗಡೆ, ಚಂದ್ರಶೇಖರ ಗೌಡ ಇತರರಿದ್ದರು.
ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ ಸ್ವಾಗತಿಸಿದರು. ಶಿಬಿರಾಧಿಕಾರಿ ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಮೇಲ್ವಿಚಾರಕ ಮಹಾದೇವ ಬಿ ಕಾರ್ಯಕ್ರಮ ನಿರ್ವಹಿಸಿದರು.ಹೇರೂರು ವಲಯ ಮೇಲ್ವಿಚಾರಕಿ ರೇಖಾ ನಾಯ್ಕ ಹಾಗೂ ಸೇವಾ ಪ್ರತಿನಿಧಿಗಳು ಸಹಕರಿಸಿದರು.