


ಇಡೀ ಸಿನಿಮಾದ ಜೀವಾಳ ಆಶಯ ಸಂದೇಶ ಎಂದರೆ ಅದು ಚಿತ್ರದ ಕ್ಲೈಮ್ಯಾಕ್ಸ್..! ಈ ನೆಲದ ಮೇಲೆ ಜಾತಿತಾರತಮ್ಯ ಮುಕ್ತವಾಗಬೇಕಾದರೆ ಯಾವ ಅತ್ವ ಅಥವಾ ಇಸಂ ನಾಶವಾಗಬೇಕು ಮತ್ತು ಯಾರು ಪರಿವರ್ತನೆಯಾಗಬೇಕು ಎಂಬುದನ್ನು ಮತ್ತು ಅದನ್ನು ಯಾರು ಹೇಗೆ ಮಾಡಬೇಕು ಎಂಬುದನ್ನು ಬಹಳ ಸೂಚ್ಯವಾಗಿ ಸಿಂಬಾಲಿಕ್ ಆಗಿ ಬ್ರಿಲಿಯಂಟ್ ಆಗಿ ಹೇಳಲಾಗಿದೆ..!
ಇದು ತರುಣ್ ಸುಧೀರ್ ಸಿನಿಮಾ ಅಲ್ಲ. ದರ್ಶನ್ ರವರ ಸಿನಿಮವೂ ಅಲ್ಲ. ರಾಕ್ ಲೈನ್ ಸಿನಿಮಾವಂತು ಅಲ್ಲವೇ ಅಲ್ಲ..! ಇದು ಜಡೇಶ್ ಎಂಬ ಶೋಷಿತ ಸಮುದಾಯದ ಮೂಲನಿವಾಸಿ ಕಥೆಗಾರನ ಸಿನಿಮಾ..!
ಹೌದು. ಸ್ವಾಭಾವಿಕವಾಗಿರುವ ನೆಲಮೂಲದ ಹೊಸತನದ ವಾಸ್ತವಕ್ಕೆ ಹತ್ತಿರದ ವಸ್ತುವಿರುವ ನೆಲಮೂಲದ ಕಥೆಯ ವಿಭಿನ್ನ ನಿರೂಪಣೆಯ ಆಯ್ದ ತಮಿಳು ಸಿನಿಮಾಗಳನ್ನು ಹೆಚ್ಚು ನೋಡುವ ನನಗೆ ಸಿನಿಮಾ ಸಾಲುಗಳಲ್ಲಿ ‘ಕಾಟೇರಾ’ ಹೊಸದೆನಿಸಲಿಲ್ಲ. ಆದರೆ ಕನ್ನಡ ನೆಲಕ್ಕೆ ಕನ್ನಡ ಸಿನಿಮಾ ವ್ಯಾಕರಣಕ್ಕೆ ಅದೂ ಸ್ಟಾರ್ ನಟರ ಸಿನಿಮಾ ಸಾಲುಗಳಿಗೆ ಇದು ನಿಜಕ್ಕೂ ಹೊಸದು ಅಗತ್ಯ ಮತ್ತು ಅದ್ಭುತ ಎನಿಸಿತು.!
ಕನ್ನಡದಲ್ಲಿ ಜಾತಿಯನ್ನೇ ವಸ್ತು ಮಾಡಿಕೊಂಡಿರುವ ಪ್ರತ್ಯಕ್ಷ ಕೆಲವೊಮ್ಮೆ ಪರೋಕ್ಷವಾಗಿ ಹೇಳುವ ಅನೇಕ ಸಿನಿಮಾಗಳು ಬಂದಿವೆ. ಇತ್ತೀಚೆಗೆ ನಮ್ಮ ಸೋದರ ನವೀನ್ ನಿರ್ದೇಶನದ ಪಾಲಾರ್ ಸಿನಿಮಾ ಕೂಡ ನೋಡಿದ್ದೆವು. ಅದೂ ಜಾತಿಹಂದರದ ನೇರ ಸಿನಿಮಾವೇ. ಅದನ್ನೇ ಒಬ್ಬ ಸ್ಟಾರ್ ನಟ ಮಾಡಿದ್ದರೆ ಕಾಟೇರ ಈಗ ಜಾತಿ ಕಥೆ ಹೇಳುವ ಎರಡನೇ ಹಿಟ್ ಸಿನಿಮಾ ಆಗಿರುತ್ತಿತ್ತು. ಕಾಂತಾರ ಸಹ ನಮ್ಮಜನರ ಕಥೆಯೇ.! ಆದರೆ ನಿರೂಪಣೆಯೊಳಗೆ ಬ್ರಾಹ್ಯಣ್ಯ ಮೌಢ್ಯ ತುರುಕಿ ನಮ್ಮ ಬಹುಜನರ ಜೇಬನ್ನು ಬರಿದಾಗಿಸಿ ಕೋಟಿಕೋಟಿ ಬಾಚಿಕೊಂಡ ಟೊಳ್ಳು ಸಿನಿಮಾ ಅದು.! ಆದರೆ ಕಾಟೇರಾ ಹಾಗಲ್ಲ. ಇದು ನೇರವಾಗಿ ನಮ್ಮ ಮೂಲನಿವಾಸಿ ಬಹುಜನರ ಬವಣೆಯ ಗಟ್ಟಿಕಥೆ..! ಕಾಸು ಕೊಟ್ಟು ನೋಡಿದರೂ ಸಾರ್ಥಕವಾಗುತ್ತದೆ. ಏನೋ ಒಂದಷ್ಟನ್ನು ಮನಸ್ಸಿಗೆ ಹೊತ್ತು ವಾಪಸ್ ಆಗುತ್ತೇವೆ..!
ಈ ಇಡೀ ಸಿನಿಮಾದ ಕ್ರೆಡಿಟ್ಟು ಕನ್ನಡ ಸಿನಿಮಾ ನೆಲಕ್ಕ ಇಂಥ ಕಥೆಬರೆದು ಕೊಟ್ಟ ಕಥೆಗಾರ ಹಾಗು ರಾಜಹಂಸ ಜಂಟಲ್ ಮ್ಯಾನ್ ಹಾಗು ಗುರುಶಿಷ್ಯರು ಎಂಬ ಸಿನಿಮಾಗಳ ನಿರ್ದೇಶಕ ಜಡೇಶ್ ಅವರಿಗೆ ಸಲ್ಲಬೇಕು. ಒಂದು ತೂಕ ಕಥೆಗಾರನದಾದರೆ ಮತ್ತೊಂದು ತೂಕ ಸಂಭಾಷಣೆ ಬರೆದ ಮಾಸ್ತಿಯವರದು. ಬಹುಶಃ ಈ ಕಥೆ ಸಿಗದಿದ್ದರೆ ತರುಣ್ ದರ್ಶನ್ ರಾಕ್ ಲೈನ್ ಹರಿಕೃಷ್ಣ ಈ ಸಿನಿಮಾ ದಿಗ್ಗಜರು ಸೇರಿ ಬೇರೊಂದು ಕಮರ್ಶಿಯಲ್ ಸಿನಿಮಾ ಮಾಡಿರುತ್ತಿದ್ದರು ಆದರೆ ಅದು ಕಾಟೇರಾ ಆಗುತ್ತಿರಲಿಲ್ಲ..! ಕಥೆಯು ಕಥೆಯಾಗೇ ಜಡೇಶರಲ್ಲೇ ಉಳಿದಿದ್ದರೂ ಇದು ಒಂದು ಮಾಸ್ ಸಿನಿಮಾ ಆಗಿ ಜನಕ್ಕೆ ತಲುಪುತ್ತಿರಲಿಲ್ಲ.! ಇದಕ್ಕೆ ಚಲನೆ ಒದಗಿಸಿದವರು ಕ್ರಿಯಾಶೀಲ ನಿರ್ದೇಶಕ ತರುಣ್ ಸುಧೀರ್ ಇದಕ್ಕೆ ಫ್ಯುಯಲ್ ಹಾಕಿದವರು ರಾಕ್ ಲೈನ್ ಮತ್ತದಕ್ಕೆ ಜೀವತುಂಬಿ ಶಕ್ತಿ ಹೆಚ್ಚಿಸಿ ವೇಗವಾಗಿ ಹೊತ್ತೊದವರು ಕಲಾವಿದ ದರ್ಶನ್ ರವರು..! ಇನ್ನುಳಿದ ತಂತ್ರಜ್ಞರು ಕಲಾವಿದರು ಎಲ್ಲರೂ ನರ ಮೂಳೆ ರಕ್ತಮಾಂಸ ಖಂಡವಾಗಿ ಪೂರಕವಾಗಿ ದುಡಿದು ಕನ್ನಡ ಸಿನಿಮಾವನ್ನು ಶ್ರೀಮಂತಗೊಳಿಸಿದ್ದಾರೆ.!
ಇಡೀ ಸಿನಿಮಾದ ಜೀವಾಳ ಆಶಯ ಸಂದೇಶ ಎಂದರೆ ಅದು ಚಿತ್ರದ ಕ್ಲೈಮ್ಯಾಕ್ಸ್..! ಈ ನೆಲದ ಮೇಲೆ ಜಾತಿತಾರತಮ್ಯ ಮುಕ್ತವಾಗಬೇಕಾದರೆ ಯಾವ ಅತ್ವ ಅಥವಾ ಇಸಂ ನಾಶವಾಗಬೇಕು ಮತ್ತು ಯಾರು ಪರಿವರ್ತನೆಯಾಗಬೇಕು ಎಂಬುದನ್ನು ಮತ್ತು ಅದನ್ನು ಯಾರು ಹೇಗೆ ಮಾಡಬೇಕು ಎಂಬುದನ್ನು ಬಹಳ ಸೂಚ್ಯವಾಗಿ ಸಿಂಬಾಲಿಕ್ ಆಗಿ ಬ್ರಿಲಿಯಂಟ್ ಆಗಿ ಹೇಳಲಾಗಿದೆ..!
ಹೌದು. ಸಿನಿಮಾಗಳು ಯಾವ ಸ್ಥಾಪಿತ ವ್ಯವಸ್ಥೆಯನ್ನೂ ಬದಲಾಯಿಸುವುದಿಲ್ಲ. ತೆರೆಯ ಮೇಲಿನ ನಟರು ತೆರೆಯ ಮೇಲೆ ವಿಜೃಂಭಿಸುವಂತೆ ನಿಜ ಜೀವನದಲ್ಲಿ ಇರುವುದಿಲ್ಲ ನಿಜ. ಆದರೆ ಇಂಥ ಕಥೆಗಳು ಸಿನಿಮಾಗಳು ನಿಜಕ್ಕೂ ಜನರನ್ನು ಚಿಂತನೆಗೆ ಹಚ್ಚುತ್ತವೆ ಮತ್ತು ನಟಿಸುವ ಕಲಾವಿದರ ಒಳಗೂ ತಣ್ಣಗೆ ದೀಪ ಹೊತ್ತಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಸಿನಿಮಾ ಹಾಗಿರಬೇಕಿತ್ತು ಅದನ್ನ ಹೀಗೆ ಹೇಳಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಇದನ್ನೂ ತೋರಿಸಬಹುದಿತ್ತು ಅದು ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದೆನಿಸುವುದು ಸಹಜ. ಆದರೆ ಇದು ಸಿನಿಮಾ ಅಷ್ಟೇ ನಮ್ಮ ಸಿನಿಮಾ ಅಲ್ಲ. ಅಲ್ಲದೆ ಕಥೆಗಾರನಿಗೂ ನಿರ್ದೇಶಕನಿಗೂ ಸಿನಿಮಾಕ್ಕೂ ಇತಿಮಿತಿಗಳಿರುತ್ತವೆ ಎಂಬುದೂ ಅಷ್ಟೇ ಸತ್ಯ. ಇದ್ದುದರಲ್ಲೇ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳಬೇಕು. ನೋಡಿಲ್ಲದವರು ಒಮ್ಮೆ ನೋಡಿ. ಜೈಭೀಮ್.
-ಹ.ರಾ.ಮಹಿಶ
