ದೇವಸ್ಥಾನಗಳು ಮಾನಸಿಕ ಗುಲಾಮಗಿರಿಗೆ ದಾರಿ: ಶಾಲೆಗಳು ಬೆಳಕಿನ ಮಾರ್ಗ; ಬಿಹಾರ ಶಿಕ್ಷಣ ಸಚಿವ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರದ ಕುರಿತು ಬಿಹಾರದ ಶಿಕ್ಷಣ ಸಚಿವ ಡಾ.ಚಂದ್ರಶೇಖರ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.
ಪಾಟ್ನಾ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರದ ಕುರಿತು ಬಿಹಾರದ ಶಿಕ್ಷಣ ಸಚಿವ ಡಾ.ಚಂದ್ರಶೇಖರ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.
ಶಾಲೆಗಳು ಜೀವನದ ಬೆಳಕಿನ ಮಾರ್ಗವಾಗಿವೆ ಎಂದು ಪಕ್ಷದ ಶಾಸಕ ಫತೇಹ್ ಬಹದ್ದೂರ್ ಸಿಂಗ್ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅಯೋಧ್ಯೆ ರಾಮಮಂದಿರ ಕುರಿತು ಮಾತನಾಡಿದ ಅವರು, ದೇವಸ್ಥಾನಕ್ಕೆ ಹೋಗುವ ಹಾದಿ ಮಾನಸಿಕ ಗುಲಾಮಗಿರಿಯ ದಾರಿಯಾಗಿದೆ. ಶಾಲೆಗಳಿಗೆ ಹೋಗುವ ಹಾದಿ ಮಾತ್ರವೇ ಬೆಳಕಿನ ಹಾದಿಯನ್ನು ಸುಗಮಗೊಳಿಸುತ್ತವೆ ಎಂದು ಹೇಳಿ, ಇದನ್ನು ನಾನು ಹೇಳಿಲ್ಲ, ಸಾವಿತ್ರಿ ಬಾಯಿ ಫುಲೆ ಅವರು ಹೇಳಿದ್ದು ಎಂದಿದ್ದಾರೆ.
ರಾಮ ಮಂದಿರಕ್ಕಾಗಿ ಮಂಜೂರು ಮಾಡಿರುವ ನಿವೇಶನ ಕೇವಲ ಶೋಷಣೆಯ ತಾಣವಾಗಿದೆ. ಇದು ಒಂದು ನಿರ್ದಿಷ್ಟ ಸಮುದಾಯದ ಕೆಲವು ಪಿತೂರಿಗಾರರ ಜೇಬು ತುಂಬುವ ಸ್ಥಳವಾಗಿದೆ. ನಾವು ಹುಸಿ ಹಿಂದುತ್ವ ಮತ್ತು ಹುಸಿ ರಾಷ್ಟ್ರೀಯತೆಯ ಬಗ್ಗೆ ಜಾಗೃತರಾಗಿರಬೇಕು. ಪ್ರತಿಯೊಂದರಲ್ಲೂ ಭಗವಾನ್ ರಾಮ ವಾಸಿಸುತ್ತಾನೆ. ಭಗವಾನ್ ರಾಮನನ್ನು ಹುಡುಕಲು ಯಾವುದೇ ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
19ನೇ ಶತಮಾನದಲ್ಲಿ ಅಸ್ಪೃಶ್ಯತೆ, ಸತಿ ಪದ್ಧತಿ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಸಾವಿತ್ರಿ ಬಾಯಿ ತಮ್ಮ ಪತಿಯೊಂದಿಗೆ ಒಟ್ಟಾಗಿ ಹೋರಾಡಿದ್ದಾರೆ. ಅವರಿಂದಲೇ ನಮ್ಮ ಸಮಾಜದಲ್ಲಿ ಪರಿಶಿಷ್ಟ ಜಾತಿಗೆ ಸ್ಥಾನ ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರು ವಿದ್ಯಾವಂತರಾಗಿ, ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.
ಯಾವುದೇ ದೇವಸ್ಥಾನಗಳು ನಿಮ್ಮ ಮಕ್ಕಳನ್ನು ಜವಾನನಿಂದ ಕಲೆಕ್ಟರ್ ಆಗಿ ಪರಿವರ್ತಿಸುವುದಿಲ್ಲ, ಪುಸ್ತಕ, ಲೇಖನಿ, ಶಾಲೆ, ಶಿಕ್ಷಣದಿಂದ ಮಾತ್ರವೇ ನಿಮ್ಮ ಮಕ್ಕಳನ್ನ ಪರಿವರ್ತಿಸಲು ಸಾಧ್ಯ. ಆದ್ದರಿಂದ ಅಕ್ಷತೆಯನ್ನು ನೀಡುವವರನ್ನು ಬಿಟ್ಟು ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಿ ಎಂದು ಕರೆ ನೀಡಿದ್ದಾರೆ.
ಗಾಯವಾದರೆ ಎಲ್ಲಿಗೆ ಹೋಗುತ್ತೀರಿ? ದೇವಸ್ಥಾನ ಅಥವಾ ಆಸ್ಪತ್ರೆ? ನಿಮಗೆ ಶಿಕ್ಷಣ ಬೇಕು, ಅಧಿಕಾರಿ, ಎಂಎಲ್ಎ ಅಥವಾ ಎಂಪಿ ಆಗಬೇಕಾದರೆ ನೀವು ದೇವಸ್ಥಾನಕ್ಕೆ ಹೋಗುತ್ತೀರಾ ಅಥವಾ ಶಾಲೆಗೆ ಹೋಗುತ್ತೀರಾ? ಫತೇ ಬಹದ್ದೂರ್ ಸಿಂಗ್ ಅವರು ಸಾವಿತ್ರ ಬಾಯಿ ಫುಲೆ ಅವರ ಮಾತನ್ನೇ ಹೇಳಿದ್ದಾರೆ ಎಂದು ಪ್ರತಿಪಾದಿಸಿದರು. ಈಗ ಏಕಲವ್ಯನ ಮಗ ತನ್ನ ಹೆಬ್ಬೆರಳನ್ನು ಬಲಿ ಕೊಡುವುದಿಲ್ಲ, ಈಗ, ಜನರಿಗೆ ಹೇಗೆ ಕಾಣಿಕೆಗಳನ್ನು ಸಲ್ಲಿಸಬೇಕೆಂದು ತಿಳಿದಿದೆ.
ಇಂತಹ ಹೇಳಿಕೆಗಳ ಮೂಲಕ ಆರ್‌ಜೆಡಿ ನಾಯಕರು ತಮ್ಮ ಮುಸ್ಲಿಂ ಮತದಾರರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕ ನಿಖಿಲ್ ಆನಂದ್ ಹೇಳಿದ್ದಾರೆ. ಹಿಂದೂಗಳನ್ನು ನಿಂದಿಸಲು ಮತ್ತು ಮುಸ್ಲಿಮರನ್ನು ಸಮಾಧಾನಪಡಿಸಲು ಆರ್‌ಜೆಡಿ ಯಾವುದೇ ಹಂತಕ್ಕೂ ಹೋಗಲು ಸಿದ್ಧವಾಗಿದೆ. ಅಯೋಧ್ಯೆ ಮತ್ತು ಮಥುರಾ ಭಾರತದ ಆಧ್ಯಾತ್ಮಿಕ-ಸಾಂಸ್ಕೃತಿಕ ಪರಂಪರೆ ಸ್ಥಾನಗಳು ಎಂದಿದ್ದಾರೆ. (ಕಪ್ರಡಾ)