ಭಟ್ಕಳದ ಮಸೀದಿಯನ್ನು ನಿರ್ನಾಮ ಮಾಡುತ್ತೇವೆ: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲು!
ಬಾಬ್ರಿ ಮಸೀದಿ ನಿರ್ನಾಮವಾದಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಕಾರವಾರ: ಬಾಬ್ರಿ ಮಸೀದಿ ನಿರ್ನಾಮವಾದಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ಎಲ್ಲೆಲ್ಲಿ ದೇವಸ್ಥಾನ ಒಡೆದು ಮಸೀದಿಗಳನ್ನು ಕಟ್ಟಿದ್ದಾರೋ ಅಲ್ಲೆಲ್ಲ ಮತ್ತೆ ದೇವಸ್ಥಾನ ನಿರ್ಮಾಣವಾಗಲಿದೆ. ಅದೇ ರೀತಿ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮವಾಗುತ್ತದೆ. ಇದನ್ನು ಬೇಕಾದರೆ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ ಎಂದು ಹೇಳಿದ್ದರು. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸುವೋಟೊ ಕೇಸ್ ದಾಖಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಅನಂತಕುಮಾರ್ ಹೆಗಡೆ ಅವರು, ನಮಗೆ ಕಾಂಗ್ರೆಸ್ ವಿರೋಧಿಯಲ್ಲ. ಆದರೆ ಹಿಂದೂ ಸಮಾಜವನ್ನು ಒಡೆಯಬೇಕೆಂಬ ಮನಸ್ಥಿತಿ ಇರುವ ಸಿದ್ದರಾಮಯ್ಯ ನಮ್ಮ ಎದುರಾಳಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಈ ವಿಡಿಯೋ ಹೊರಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಕುಮಟಾ ಪೊಲೀಸರು ದ್ವೇಷ ಭಾಷಣ ಹಾಗೂ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನ ಮಾಡಿರುವುದಾಗಿ ಸೆಕ್ಷನ್ 505 ಹಾಗೂ 153 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.