ಯುದ್ಧದಾಹಿ ಕೋದಂಡರಾಮ ನಮ್ಮ ರಾಮನಲ್ಲ
ರಾಮನು ಸೀತಾ ಸ್ವಯಂವರದಲ್ಲಿ ಶಿವಧನಸ್ಸನ್ನು ಎದೆಯ ಮೇಲೇರಿಸಿಕೊಂಡು ಮುರಿಯುವ ಮೂಲಕ ಸೀತೆಯನ್ನು ಗೆದ್ದುಕೊಂಡು ಶಿವ ಸಂಸ್ಕೃತಿಯ ಮೇಲೆ ಬಲವಾದ ಪ್ರಹಾರ ನೀಡಿ ಆರ್ಯ ಸಂಸ್ಕೃತಿಯ ಸೌಧವನ್ನು ಕಟ್ಟಲು ಮುಂದಾದವನು. ಶಿವಧನಸ್ಸನ್ನು ಮುರಿಯುವುದೆಂದರೆ ಶಿವಸಂಸ್ಕೃತಿಯ ಮೂಲದ ಸೀತೆಯ ಪ್ರೀತಿಯನ್ನು ಪಡೆಯುವ ಬದಲಾಗಿ ಅವಳ ದೇಹದ ಮೇಲೆ ಪುರುಷನ ಹಕ್ಕು ಸ್ಥಾಪಿಸುವುದೆಂದೇ ಅರ್ಥ. ರಾವಣನು ಸೀತೆಯ ದೇಹದ ಮೇಲೆ ಯಾವುದೇ ಹಕ್ಕು ಸ್ಥಾಪಿಸದಿದ್ದರೂ ಅವಳಾಗಿಯೇ ರಾವಣನ ಚಿತ್ರವನ್ನು ಬರೆದು ತನ್ನ ಹೃದಯದಲ್ಲಿ ಅಚ್ಚೊತ್ತಿಕೊಂಡವಳು ಸೀತೆ. ಮಹಿಳಾ ಪ್ರಧಾನವಾದ ಸಂಸ್ಕೃತಿಯನ್ನು ನಾಶಮಾಡಿ ಪುರುಷ ಪ್ರಧಾನ ಬೀಜಗಳ ಬಿತ್ತನೆ ಪ್ರಾರಂಭವಾದದ್ದು ರಾಮನಿಂದಲೇ ಅನ್ನಿಸುತ್ತಿದೆ.
ಪುರುಷ ನಿರ್ಮಿತವಾದ ಲಕ್ಷ್ಮಣರೇಖೆಯನ್ನು ದಾಟಿ ರಾವಣನೊಂದಿಗೆ ಹೋಗುವುದೆಂದರೆ ಸೀತೆಯಲ್ಲಿರುವ ದ್ರಾವಿಡ ಪ್ರಧಾನ ಮಾತೃ ಸಂಸ್ಕೃತಿಯ ಲಕ್ಷಣದ ಪ್ರತೀಕವಾಗಿ ಕಾಣಿಸುತ್ತದೆ. ಸೀತೆಯನ್ನು ಅರಸಿ ಹೊರಟ ರಾಮನು ತಲುಪುವುದು ಅಶೋಕ ವನವನ್ನು. ಅಶೋಕ ಎಂಬುದು ಬೌದ್ಧ ನಾಯಕನ ಹೆಸರು. ಭಾರತ ದೇಶವನ್ನು ಮಸ್ಕಿ ಶಾಸನದಲ್ಲಿ ‘ಜಂಬೂದ್ವೀಪ’ ಎಂದು ಕರೆದಿರುವ ದೇವನಾಂಪ್ರಿಯ ಅಶೋಕ ಒಬ್ಬ ಬೌದ್ಧ ದೊರೆ. ರಾಮನು ತಲುಪುವ ಅಶೋಕ ವನವು, ಸಾಮ್ರಾಟ ಅಶೋಕನಿಗೂ ಪೂರ್ವದಲ್ಲಿದ್ದ, ಅಷ್ಟೇ ಏಕೆ ರಾವಣನಿಗೂ ಪೂರ್ವದಲ್ಲಿದ್ದ ಬೌದ್ಧ ನಾಯಕನಾದ ಅಶೋಕನ ಹೆಸರಿನದ್ದಾಗಿರಲು ಸಾಧ್ಯವಿದೆ. ಆ ಅಶೋಕನ ಧರ್ಮ ಬೌದ್ಧ ಧರ್ಮವೇ ಆಗಿದ್ದು ಅವನು ನಿಸರ್ಗದ ನಡುವೆ ಶಿವನನ್ನು ನಿಸರ್ಗದ ನಿರ್ಗುಣ ತತ್ವದಲ್ಲಿ ಉಪಾಸನೆ ಮಾಡುವವನಾಗಿದ್ದಾನೆ.
ರಾಮನ ರಾಜ್ಯದಲ್ಲಿ ಶಂಭೂಕ ಮುನಿಯನ್ನು ಹತ್ಯೆಗಯ್ಯುವಂತಹ ಜಾತಿ – ವರ್ಣ ಪದ್ದತಿ ಇದ್ದರೆ ರಾವಣನ ರಾಜ್ಯದಲ್ಲಿ ಜಾತಿ – ವರ್ಣ ಪದ್ಧತಿ ಇರುವುದಿಲ್ಲ. ಬುದ್ಧನ ಧಮ್ಮದಲ್ಲಿಯೂ ಜಾತಿ- ವರ್ಣ ಪದ್ದತಿ ಇರುವುದಿಲ್ಲ. ಬುದ್ಧನ ಸಮಾಜದಲ್ಲಿ ಜಾತಿವರ್ಣಗಳ ವಿಷಬೀಜವನ್ನು ಬಿತ್ತಿ ದ್ವಿಜ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿದವರೇ ವೈದಿಕಶಾಹಿ ಆರ್ಯರು. ಅದನ್ನು ಅವರು ಯಜ್ಞ ಯಾಗ ಹೋಮ ಹವನ ಮುಂತಾದ ಅಚರಣೆಗಳನ್ನು ಕೈಗೊಳ್ಳುವ ಮೂಲಕ ಪ್ರಾರಂಭಿಸುತ್ತಾರೆ. ಇದೇ ಆರ್ಯರು ರಾವಣನ ಲಂಕೆಯಲ್ಲಿಯೂ ಜಾತಿ- ವರ್ಣಗಳೆಂಬ ವಿಷಬೀಜವನ್ನು ಬಿತ್ತಲು ಹೋದರು. ಅವರು ಯಜ್ಞ ಯಾಗ ಹೋಮ ಹವನ ಮುಂತಾದ ಅಚರಣೆಗಳನ್ನು ಲಂಕೆಯಲ್ಲಿಯೂ ಕೈಗೊಳ್ಳುವ ಮೂಲಕ ಲಂಕೆಯ ಕಾಡು ಜನರಿಗೆ ಮತ್ತು ಜೀವಮಂಡಲಕ್ಕೆ ಅನೇಕ ರೀತಿಯಲ್ಲಿ ಕೇಡುಗಳನ್ನು ತಂದೊಡ್ಡಿದರು.
ಇಂತಹ ಶಿವಸಂಸ್ಕೃತಿ ವಿರೋಧಿ ವಿಷಕಾರಕ ಆರ್ಯ ನಾಯಕರಿಗೂ ಲಂಕೆಯ ಮೂಲ ನಿವಾಸಿಗಳಿಗೂ ದೊಡ್ಡ ಸಂಘರ್ಷವೇ ನಡೆಯಿತು. ಈ ಸಂಘರ್ಷದಲ್ಲಿ ರಾವಣನ ಮಗನಾದ ಮೇಘನಾದನು ಆರ್ಯ ಪ್ರಧಾನ ನಾಯಕನಾದ ಇಂದ್ರನನ್ನು ಕೊಂದು ‘ಇಂದ್ರಜಿತ್’ ಎಂದು ಬಿರುದಾಂಕಿತನಾದ. ಹೀಗಾಗಿ ಶಿವ ಸಂಸ್ಕೃತಿಯ ಪ್ರಧಾನ ನೆಲೆ ದಕ್ಷಿಣವೇ ಆಗಿದ್ದು ದಕ್ಷಿಣ ಭಾರತದಲ್ಲಿ ಪ್ರಧಾನವಾಗಿ ಶೈವಾರಾಧಕರು ಸಾಂಧ್ರವಾಗಿ ನೆಲೆಸಿದ್ದಾರೆ. ಉಪಾಸನಾ ಪ್ರಜ್ಞೆಯ ಕೇಂದ್ರದಲ್ಲಿರಬೇಕಾದದ್ದು ಸಕಲ ಜೀವಮಂಡಲದ ಸಂರಕ್ಷಕನೂ ಅರ್ಧನಾರೀಶ್ವರ ಸಮಾನತಾಭಾವದ ಮಹಿಳಾಪರ ಶಿವನೇ ಹೊರತು, ಯಜ್ಞ ಯಾಗ ಹೋಮ ಹವನಗಳ ಆಚರಣೆಗಳಿಂದ ಪ್ರಕೃತಿಗೂ ಜೀವಮಂಡಲಕ್ಕೂ ವಿಜ್ಞಗಳನ್ನುಂಟುಮಾಡುವ ಜೀವವಿರೋಧಿಯೂ ಮತ್ತು ಗರ್ಭವತಿ ಸೀತೆಯನ್ನು ಕಾಡಿಗಟ್ಟಿದ ಅಥವಾ ಹೆಣ್ಣನ್ನು ಬೆಂಕಿಗೆ ನೂಕಿದ ಮಹಿಳಾ ವಿರೋಧಿಯೂ ಆದ ರಾಮನಲ್ಲ.
ಇವೊತ್ತು ನಾವೆಲ್ಲರೂ ತಿಳಿಯಬೇಕಾದ ಸಂಗತಿಯೆಂದರೆ, ದಕ್ಷಿಣ ಏಷ್ಯಾದ ಸಾಕ್ರೆಟಿಸ್ ಎಂದು ವಿಶ್ವಸಂಸ್ಥೆಯಿಂದಲೇ ಕರೆಸಿಕೊಂಡ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು “ತುಂಬಿದ ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಅಟ್ಟಿದ, ಸೂರ್ಪನಖಿಯ ಮೂಗು ಮುಂದಲೆ ಮೊಲೆಗಳನ್ನು ತನ್ನ ಸಹೋದರ ಲಕ್ಷ್ಮಣನಿಂದಲೇ ಕತ್ತರಿಸಿ ಮಹಿಳೆಯನ್ನು ಅವಮಾನಪಡಿಸಿದ ಶ್ರೀರಾಮನನ್ನು ಸ್ತ್ರೀಕುಲ ಯಾವೊತ್ತಿಗೂ ಕ್ಷಮಿಸಬಾರದು” ಎಂದು ಕರೆ ನೀಡಿದ್ದರು. ಮಹಿಳೆಯರು ರಾಮನಿಗಿಂತಲೂ ರಾವಣನು ಸ್ತ್ರೀಪರ ಎಂಬುದನ್ನು ಗ್ರಹಿಸುವ ಅಗತ್ಯವಿದೆ.
ಕೋಲಾರ ಜಿಲ್ಲೆಯ ವಕ್ಕಲೇರಿ ಗ್ರಾಮದಲ್ಲಿ ರಾವಣನ ಗುಡಿ ಇದೆ. ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಜನ ರಾವಣೋತ್ಸವ ಜಾತ್ರೆ ನಡೆಸುತ್ತಾ ಬಂದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಆನೇಕಲ್ ನ ಮುತ್ತಾನಲ್ಲೂರಿನಲ್ಲಿಯೂ ಸಹ ರಾವಣೇಶ್ವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ತಲಕಾಡಿನ ಸಮೀಪ ರಾವಣಿ ಎಂಬ ಊರು ಇದೆ. ಈ ಭಾಗದಲ್ಲಿ ರಾವಣನ ದೇವಾಲಯಗಳಿದ್ದು, ಇಲ್ಲಿನ ದಲಿತರು ಮತ್ತಿತರ ತಳಜಾತಿಗಳಿಗೆ ರಾವಣನು ಆರಾಧನೆಯ ವ್ಯಕ್ತಿಯಾಗಿರುವನೇ ಹೊರತು ರಾಮನಲ್ಲ. ಈ ಸೀಮೆಯ ದಲಿತರು ಮದುವೆ ಸಂಬಂಧ ಬೆಳೆಸುವಾಗ “ನಮ್ಮದು ರಾವಣನ ಕುಲ _ಸಿಲೋನ್ ತಳ” ಎಂದು ಪರಸ್ಪರ ಪರಿಚಯ ಹೇಳಿಕೊಳ್ಳುತ್ತಾರೆ. ‘ಸಿಲೋನ್ ತಳ’ ಎಂಬುದರ ಮೂಲಕ ಚಾಮರಾಜನಗರ ಜಿಲ್ಲೆಯ ದಲಿತರು ತಮ್ಮದು ಸಿಲೋನ್ ಅಥವಾ ಶ್ರೀಲಂಕಾ ಮೂಲ ಎಂದು ಕ್ಲೇಮು ಮಾಡುತ್ತಿದ್ದಾರೆ. ಇಂತಹ ವರ್ತನೆಯನ್ನು ನೋಡಿದರೆ ಅಲ್ಲಿನ ದಲಿತರು ಬೌದ್ಧ ನಾಡಾದ ಶ್ರೀಲಂಕಾದ ರಾವಣನ ಮೂಲದವರಿರಬಹುದು ಎಂಬ ಅನುಮಾನ ಮೂಡುತ್ತದೆ. ಅವರು ಭಾರತಕ್ಕೆ ಶ್ರೀಲಂಕಾದಿಂದ ವಲಸೆ ಬಂದವರಿರಬೇಕು. ತಮ್ಮ ಕುಲಮೂಲದ ಬೇರುಗಳನ್ನು ಮರೆಯದ ಈ ಮಹಿಮಾನ್ವಿತ ದಲಿತರು ಹೆಮ್ಮೆಯಿಂದ, “ನಮ್ಮದು ರಾವಣನ ಕುಲ _ ಸಿಲೋನ್ ತಳ” ಎಂದು ಹೇಳಿಕೊಳ್ಳುತ್ತಿದ್ದಾರೆನ್ನಿಸುತ್ತದೆ.
ಗಾಂಧೀಜಿಯವರ ಎದೆಯ ಉಸಿರಾಗಿದ್ದವನು ಜನಪದರ ರಾಮ. ಜನಪದರ ರಾಮನು ಆರ್ಯರು ಚಿತ್ರಿಸಿರುವಂತೆ ಯುದ್ಧ ಪಿಪಾಸುವಾಗಿಲ್ಲ. ತನಗೆ ಹಸಿವಾದಾಗ ಶೂದ್ರಳಾದ ಶಬರಿಯು ತಿಂದು ರುಚಿನೋಡಿದ್ದ ಎಂಜಲ ಹಣ್ಣಗಳನ್ನು ತಿನ್ನಬಲ್ಲವನು ಜನಪದರ ರಾಮ. ಬ್ರಾಹ್ಮಣರು ಅಧಿಕಾರ ಸ್ಥಾಪಿಸಿಕೊಂಡ ತಪಸ್ಸಾಚರಣೆಯನ್ನು ಅದೇ ಶೂದ್ರ ಶಂಭೂಕನು ಮಾಡುತ್ತಿದ್ದಾನೆಂಬ ಕಾರಣಕ್ಕೆ ಶೂದ್ರಮುನಿಯನ್ನು ಹತ್ಯೆ ಮಾಡಿದ್ದು ವೈದಿಕಾರ್ಯರ ರಾಮನೇ ಹೊರತು ಜನಪದರ ರಾಮನಲ್ಲ. ಗಾಂಧೀಜಿಯ ಎದೆಯೊಳಗಿದ್ದ ಜನಪದರ ರಾಮನು ಸ್ತ್ರೀ ಮತ್ತು ಜೀವ ವಿರೋಧಿಯಲ್ಲ. ರಾಮ ಲಕ್ಷ್ಮಣ ಸೀತೆ ಸದಾ ಅನ್ಯೋನ್ಯವಾಗಿದ್ದು ಜೊತೆ ಬಿಟ್ಟಗಲದೆ ಸರ್ವೋದಯವನ್ನು ಬಯಸುವ ರಾಮನೇ ಗಾಂಧೀಜಿಯ ಎದೆಯೊಳಗಿದ್ದ ರಾಮ. ಆದರೆ ಆರ್ಯರ ರಾಮ ಸದಾ ಯುದ್ಧಾಸ್ತ್ರವನ್ನು ಎದೆಗೇರಿಸಿ ಶತೃ ಸಂಹಾರಕ್ಕಾಗಿ ಏಕಾಂಗಿ ರಣಾಗ್ರಣಿಯಂತೆ ನಿಂತಿರುತ್ತಾನೆ. ಈಗಲೂ ದುಡಿಮೆಗಾರ ಜನವರ್ಗಗಳು ಮತ್ತು ಜೀವಪರ ಮನಸ್ಸುಗಳಲ್ಲಿ ಮಿಡಿಯುತ್ತಿರುವುದು ಸೀತಾ ಲಕ್ಷ್ಮಣ ಹನುಮಂತ ಸಮೇತನಾದ ಜನಪದರ ಜನಪರ ರಾಮನೇ ಹೊರತು, ಯುದ್ಧದಾಹಿ ಏಕಾಂಗಿ ಕೋದಂಡರಾಮನಲ್ಲ ಎಂಬುದನ್ನು ಮರೆಯದಿರೋಣ.
ಡಾ.ವಡ್ಡಗೆರೆ ನಾಗರಾಜಯ್ಯ
8722724174