

ಕತೆ, ನಿರ್ದೇಶನ ಮತ್ತು ಅಭಿನಯದ ಕಾರಣಕ್ಕಾಗಿಯೇ ಎಲ್ಲರೂ ನೋಡಲೇಬೇಕಾದ ಚಿತ್ರ ‘ಕೋಳಿ ಎಸ್ರು’. ಇದರ ಜೊತೆ ಈ ಚಿತ್ರವನ್ನು ನೋಡಲು ಇನ್ನೊಂದು ಕಾರಣವೂ ಇದೆ. ಕನ್ನಡದ ಕೆಟ್ಟ ಚಿತ್ರಗಳನ್ನು ನೋಡಿ ಯಾರಾದರೂ ಪಾಪಪ್ರಜ್ಞೆಯಿಂದ ನರಳುತ್ತಿದ್ದರೆ, ಅವರು ಈ ಚಿತ್ರವನ್ನು ನೋಡಿ ಮಾಡಿರುವ ಪಾಪವನ್ನು ಪರಿಹರಿಸಿಕೊಳ್ಳಬಹುದು. ಪಾಪಿಗಳು ದೇವಸ್ಥಾನದ ಕಾಣಿಕೆ ಡಬ್ಬಿಗೆ ಹಣಹಾಕಿ ಪಾಪ ತೊಳೆದುಕೊಂಡ ಹಾಗೆ.

ಸಿನೆಮಾ ಒಂದು ಕಲೆಯಾಗಿ ಉಳಿದಿಲ್ಲ, ಅದು ಕೂಡಾ ಬಂಡವಾಳ ಹಾಕಿ ಲಾಭ ತೆಗೆಯುವ ಉದ್ಯಮವಾಗಿದೆ. ಚಿತ್ರದ ಕೇಂದ್ರ ಸ್ಥಾನದಲ್ಲಿದ್ದ
ಕತೆ, ನಾಯಕ-ನಾಯಕಿ ಮತ್ತು ನಿರ್ದೇಶಕ ಪಕ್ಕಕ್ಕೆ ಸರಿದು ನಿರ್ಮಾಪಕ ಆ ಸ್ಥಾನವನ್ನು ಆಕ್ರಮಿಸಿಕೊಂಡು ಬಹಳ ದಿನಗಳಾಗಿದೆ. ಪ್ಯಾನ್ ಇಂಡಿಯಾ ಕಿರೀಟಕ್ಕಾಗಿಯೇ ಹಣದ ಹೊಳೆ ಹರಿಸಲಾಗುತ್ತಿದೆ. ಈ ಹಣ ಸಿನೆಮಾದಿಂದಲೇ ವಾಪಸು ಬರುತ್ತಿದೆಯೋ ಇಲ್ಲವೇ ಬೇರೇನಾದರೂ ಕರಾಮತ್ತು ಇದೆಯೇ ಎನ್ನುವುದನ್ನು ಬಲ್ಲವರು ಹೇಳಬೇಕು. ಇವೆಲ್ಲದರ ನಡುವೆ ತನ್ನ ಸ್ಥಾನ ಮತ್ತು ಮಾನ ಬಿಟ್ಟುಕೊಡುವುದಿಲ್ಲ ಎಂಬ ಛಲದೊಂದಿಗೆ ನೆಲಕಚ್ಚಿ ನಿಂತ ನಿರ್ಮಾಪಕರು, ನಿರ್ದೇಶಕರು ಮತ್ತು ನಟನಟಿಯರೂ ಇದ್ದಾರೆ. ಅವರನ್ನು ‘’ಕೋಳಿ ಎಸ್ರು’’ ಚಿತ್ರದಲ್ಲಿ ಕಾಣಬಹುದು.
ಕಾ.ತ.ಚಿಕ್ಕಣ್ಣ ಅವರ ಸಣ್ಣ ಕಥೆಯನ್ನಾಧರಿಸಿದ ‘’ಕೋಳಿ ಎಸ್ರು’’ ಚಿತ್ರವನ್ನು ಚಂಪಾ ಶೆಟ್ಟಿಯವರು ನಿರ್ದೇಶಿಸಿದ್ದಾರೆ. ಈಗಾಗಲೇ ಜನ ಮೆಚ್ಚಿರುವ ‘’ಅಮ್ಮಚ್ಚಿಯೆಂಬ ನೆನಪು’’ ಚಿತ್ರವನ್ನು ನಿರ್ದೆಶಿಸಿರುವ ಚಂಪಾಶೆಟ್ಟಿ ಅವರು ರಂಗಭೂಮಿಯಲ್ಲಿ ಕೆಲಸ ಮಾಡಿದವರು. ಅವರ ನಿರ್ದೇಶನದ ‘’ಗಾಂಧಿ ಬಂದ’’ ನಾಟಕ ಮರೆಯಲಾಗದ್ದು.
ತನ್ನ ಹತ್ತಾರು ಇತರ ಸಾಹಸಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುವ ಅಕ್ಷತಾ ಪಾಂಡವಪುರ ಮೂಲತ: ಪ್ರತಿಭಾವಂತ ನಟಿ. ಇವರನ್ನು ಮೊದಲ ಬಾರಿ ‘’ಒಬ್ಬಳು’’ ಏಕಾಂಕದಲ್ಲಿ ನೋಡಿದಾಗ ಮತ್ತೆ ಸ್ಮಿತಾ ಪಾಟೀಲ್ ಎಲ್ಲಿಂದ ಎದ್ದು ಬಂದರು ಎಂದು ಅಚ್ಚರಿಪಟ್ಟಿದ್ದೆ. ರಾಜ್ಯಪ್ರಶಸ್ತಿ ತಂದುಕೊಟ್ಟ ‘’ಪಲ್ಲಟ’’ ಮತ್ತು ಇತ್ತೀಚಿನ ‘’ಪಿಂಕಿ ಎಲ್ಲಿ’’ ಚಿತ್ರದಲ್ಲಿ ನೋಡಿದವರಿಗೆ ಅಕ್ಷತಾ ಅವರ ಪ್ರತಿಭೆಯ ಪರಿಚಯವಾಗಿರಬಹುದು. ಕನ್ನಡ ಚಿತ್ರರಂಗ ಇಂತಹ ಕಲಾವಿದರನ್ನು ಬಳಸಿಕೊಳ್ಳಲು ಸೋತಿರುವುದು ಅಚ್ಚರಿ ಅಲ್ಲ. ಇವರಿನ್ನೂ ತಮಿಳು, ಮಲೆಯಾಳಿ ನಿರ್ದೇಶಕರ ಕಣ್ಣಿಗೆ ಯಾಕೆ ಬಿದ್ದಿಲ್ಲ ಎನ್ನುವುದಷ್ಟೇ ಅಚ್ಚರಿ.
ಈ ಇಬ್ಬರು ಪ್ರತಿಭಾವಂತೆಯರ ಜೊತೆ ಎಂಬ ಅಪೇಕ್ಷಾ ನಾಗರಾಜ್ ಎಂಬ ಭರವಸೆಯ (ಬಾಲ)ಕಲಾವಿದೆ ಕೂಡಾ ಸೇರಿಕೊಂಡಿದ್ದಾರೆ.
ನಾನು ಸಿನೆಮಾ ವಿಮರ್ಶಕನಲ್ಲದ ಕಾರಣ ಆ ಅಧಿಕಪ್ರಸಂಗತನ ಮಾಡೋದಿಲ್ಲ. ಒಂದೇ ಸಾಲಿನಲ್ಲಿ ಹೇಳುವುದಾದರೆ ಕತೆ, ನಿರ್ದೆಶನ, ಅಭಿನಯ, ಸಂಭಾಷಣೆ, ಸಂಗೀತ ಮತ್ತು ಛಾಯಾಗ್ರಹಣ- ಈ ಆರೂ ವಿಭಾಗಗಳಲ್ಲಿಯೂ ನೂರಕ್ಕೆ ನೂರು ಅಂಕ ಪಡೆಯುವ ಚಿತ್ರ ‘ಕೋಳಿ ಎಸ್ರು’’
ತಾಯಿ-ಮಗಳ ಸಂಬಂಧದ ಕತೆಯಾಗಿ ಪ್ರಾರಂಭವಾಗುವ ಚಿತ್ರ, ವ್ಯವಸ್ಥೆಯ ವಿರುದ್ದ ಸಿಡಿದೆದ್ದ ಸ್ವಾಭಿಮಾನಿ ಹೆಂಡತಿಯನ್ನು ತೋರಿಸಿ ಕೊನೆಗೊಳ್ಳುತ್ತದೆ.
ಚಿತ್ರದ ಕತೆ ಈ ಕಾಲಕ್ಕೆ ಅಪ್ರಸ್ತುತವಾಗಿದೆ, ಕೋಳಿ ಸಾರಿಗಾಗಿ ಇಷ್ಟೆಲ್ಲ ಬವಣೆ ಪಡುವ ಬಡತನ ಈಗೆಲ್ಲಿದೆ ಎಂದು ಕೇಳುವವರಿಗೆ, ಕೆಜಿಎಫ್ ಚಿತ್ರದಲ್ಲಿ ಈಗಿನ ಕೋಲಾರ ಎಲ್ಲಿದೆ ಎಂಬ ಪ್ರಶ್ನೆಯೇ ಉತ್ತರ.
ಇಂತಹದ್ದೊಂದು ಕಾಲಕ್ಕೆ ಅಪ್ರಸ್ತುತವಾದ ಕತೆಯ ಸಿನೆಮಾವನ್ನು ನಾವು ಎಂತಹ ಕಾಲದಲ್ಲಿದ್ದೆವು ಎನ್ನುವುದನ್ನು ಮೆಲುಕು ಹಾಕಿಕೊಳ್ಳಲಿಕ್ಕಾದರೂ ಒಮ್ಮೆ ನೋಡಬೇಕು, ಬಹುಷ: ಈ ಮೆಲುಕಾಟ ನಮ್ಮನ್ನು ಇನ್ನಷ್ಟು ಒಳ್ಳೆಯ ಮನುಷ್ಯರನ್ನಾಗಿ ಮಾಡಬಹುದೇನೋ?
ದಯವಿಟ್ಟು ಥಿಯೇಟರ್ ಗೆ ಹೋಗಿ ಚಿತ್ರ ನೋಡಿ,
ಬೇಗ ಹೋಗಿ..

