ಸುಳ್ಳು ಹರಡಲು ಕಾರಣಕರ್ತನಾದ ಮಾಜಿ ಪತ್ರಕರ್ತ ಹೊಟ್ಟೆಗೆ ತಿನ್ನುವುದು ಏನನ್ನ ಎಂಬುದನ್ನು ತಿಳಿಸಲಿ: ಕಾಂಗ್ರೆಸ್
ಈತ ಮುಖ್ಯಸ್ಥನಾಗಿದ್ದ ಮಾಧ್ಯಮ ಸಂಸ್ಥೆಯೂ ಆತ ಹೇಳಿದ ಸುಳ್ಳನ್ನೇ ಪ್ರಸಾರ ಮಾಡಿದೆ ಎಂದರೆ ಆತ ನಿಜಕ್ಕೂ ಪತ್ರಕರ್ತನಾಗಿ ಮಾಜಿಯಾಗಿದ್ದಾನಾ ಎಂಬ ಅನುಮಾನ ಮೂಡುತ್ತಿದೆ! ಎಂದು ಕಾಂಗ್ರೆಸ್ ತಪರಾಕಿ ಹಾಕಿದೆ.
ಬೆಂಗಳೂರು: ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಸಹ ರಾಜಕೀಯ ವಿವಾದದ ವಸ್ತುವಾಗಿ ಪರಿಣಮಿಸಿದೆ. ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ , ಮಾರ್ಚ್ ಒಂದನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ SSLC ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ SSLC ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ, ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಇದರಲ್ಲಿ ಸುಳ್ಳು ಅಪಪ್ರಚಾರದ ಮೂಲಕ ಪ್ರಚೋದನೆಗೆ ಬಳಸಿಕೊಳ್ಳಲು ಮುಂದಾಗಿರುವ ರಾಜ್ಯ ಬಿಜೆಪಿಗೆ ಗೆ ಕನಿಷ್ಠ ಮರ್ಯಾದೆ ಇಲ್ಲ. ನಮಾಜ್ ಮಾಡುವುದಕ್ಕಾಗಿ ಶುಕ್ರವಾರ SSLC ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಗಾಂಪರು ಅದೇ ದಿನ ಬೆಳಿಗ್ಗೆ PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವ ಅಗತ್ಯವಿಲ್ಲವೇ ಎಂಬುದನ್ನು ಉತ್ತರಿಸಲಿ!
ಈ ಸುಳ್ಳು ಹರಡಲು ಕಾರಣಕರ್ತನಾದ ಮಾಜಿ ಪತ್ರಕರ್ತ!?, ಹಾಲಿ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೊಟ್ಟೆಗೆ ತಿನ್ನುವುದು ಏನನ್ನ ಎಂಬುದನ್ನು ತಿಳಿಸಲಿ. ಈತ ಮುಖ್ಯಸ್ಥನಾಗಿದ್ದ ಮಾಧ್ಯಮ ಸಂಸ್ಥೆಯೂ ಆತ ಹೇಳಿದ ಸುಳ್ಳನ್ನೇ ಪ್ರಸಾರ ಮಾಡಿದೆ ಎಂದರೆ ಆತ ನಿಜಕ್ಕೂ ಪತ್ರಕರ್ತನಾಗಿ ಮಾಜಿಯಾಗಿದ್ದಾನಾ ಎಂಬ ಅನುಮಾನ ಮೂಡುತ್ತಿದೆ! ಎಂದು ಕಾಂಗ್ರೆಸ್ ತಪರಾಕಿ ಹಾಕಿದೆ.
ತುಷ್ಟೀಕರಣ ರಾಜಕಾರಣದ ಪಿತಾಮಹ ಸಿಎಂ ಸಿದ್ದರಾಮಯ್ಯ ಅವರು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿಯೂ ಸಹ ಓಲೈಕೆ ರಾಜಕಾರಣಕ್ಕೆ ಆದ್ಯತೆ ನೀಡಿದ್ದಾರೆ. ಶುಕ್ರವಾರ ನಡೆಯುವ ಪರೀಕ್ಷೆ ಮಧ್ಯಾಹ್ನ 2 ಗಂಟೆ ನಂತರವಂತೆ, ಉಳಿದ ದಿನ ನಡೆಯುವ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಗೆ ಆರಂಭವಂತೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕ ಆಡಳಿತವನ್ನು ತಾಲಿಬಾನ್ & ಐಸಿಸ್ ಮಾದರಿಯಲ್ಲಿ ಮುನ್ನಡೆಸುತ್ತಿರುವುದು ಅವರ ನಿಲುವುಗಳಿಂದಲೇ ಸಾಬೀತಾಗುತ್ತಿದೆ. ಪರೀಕ್ಷೆ ವಿಚಾರದಲ್ಲೂ ಒಂದು ಸಮುದಾಯಕ್ಕೆ ಇಷ್ಟೊಂದು ಓಲೈಕೆ ಮಾಡುವ ಕಾಂಗ್ರೆಸ್, ಹಿಂದೂ ವಿದ್ಯಾರ್ಥಿಗಳನ್ನು ಈಗ ಎರಡನೇ ದರ್ಜೆಗೆ ಇಳಿಸಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ತೂರಿ ಬರುತ್ತಿರುವ ನಿಮ್ಮ ಹೊಲಸು ತುಷ್ಟೀಕರಣಕ್ಕೆ ಕರ್ನಾಟಕದ ಜನತೆ ಅಂತಿಮ ಮೊಳೆ ಹೊಡೆಯುವುದು ನಿಶ್ಚಿತ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. (kpc)