



ಬಿಳಿ ನಾಮಫಲಕದ ವಾಹನಗಳಲ್ಲಿ ಬಾಡಿಗೆ ಪಡೆಯುವುದನ್ನು ನಿಯಂತ್ರಿಸುವುದು ಮತ್ತು ಪ್ರವಾಸಿ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಮಾಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ತಾಲೂಕಾ ಆಡಳಿತದ ಬಗ್ಗೆ ಅಸಮಧಾನಗೊಂಡಿರುವ ಶ್ರೀ ಬೀರಗುಂಡಿ ಭೂತೇಶ್ವರ ಪ್ರವಾಸಿ ವಾಹನ ಚಾಲಕ ಮಾಲಕರ ಸಂಘ ಈ ಬಗ್ಗೆ ಒಂದು ವಾರದ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಫೆ. ೨೨ ರಂದು ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದೆ.

ಈ ಬಗ್ಗೆ ಸಿದ್ಧಾಪುರ ಶಂಕರಮಠದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಗಣಪತಿ ನಾಯ್ಕ ಮತ್ತು ಸಂಘಡಿಗರು ಕಳೆದ ಹಲವಾರು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಶಾಸಕರು,ಸ್ಥಳೀಯ ಅಧಿಕಾರಿಗಳಿಗೆ ತಿಳಿಸುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ ಈಗ ಒಂದು ವಾರದ ವರೆಗೆ ಗಡುವು ನೀಡಿ ೨೨ ರಂದು ರಸ್ತೆ ತಡೆ ನಡೆಸಿ ನಮ್ಮ ಹಕ್ಕೊತ್ತಾಯ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಪ್ರವಾಸಿ ವಾಹನ ನಿಲುಗಡೆಗೆ ಸ್ಥಳ ನಿಗದಿ,ಅನಧೀಕೃತ ವಾಹನಗಳಲ್ಲಿ ಶಾಲಾ ಮಕ್ಕಳ ರವಾನೆ ನಿಯಂತ್ರಣ ಸೇರಿದಂತೆ ಕೆಲವು ಬೇಡಿಕೆಗಳಿಗೆ ಸ್ಪಂದಿಸಲು ತಾಲೂಕಾ ಆಡಳಿತ ಸಹಕರಿಸಬೇಕೆಂದು ಅವರು ವಿನಂತಿಸಿದರು.
