

ತೆರಿಗೆ ಹಂಚಿಕೆ ತಾರತಮ್ಯ: ಕರ್ನಾಟಕ ನಂತರ ಕೇರಳ, ತಮಿಳುನಾಡಿನಿಂದ ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ
ತಮ್ಮ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯದ ವಿರುದ್ಧ ಕರ್ನಾಟಕದ ನಂತರ ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಗುರುವಾರ ದೆಹಲಿಯಲ್ಲಿ ಪ್ರತ್ಯೇಕ…

ತಿರುವನಂತಪುರಂ/ಚೆನ್ನೈ: ತಮ್ಮ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯದ ವಿರುದ್ಧ ಕರ್ನಾಟಕದ ನಂತರ ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಗುರುವಾರ ದೆಹಲಿಯಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಲಿವೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್‌ನ ಪ್ರತಿಭಟನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಬೆಂಬಲ ನೀಡಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ಪ್ರತಿಭಟನೆಯಲ್ಲಿ ಎಡರಂಗದ ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ.
ಕೇಂದ್ರದ ತಾರತಮ್ಯದ ಪರಿಣಾಮ ರಾಜ್ಯ ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸುತ್ತಿದ್ದು, ಅನಿವಾರ್ಯವಾಗಿ ಪ್ರತಿಭಟನೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಕ್ರಮಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಆರೋಪಿಸಿದ್ದರು.
2024-25ರ ಮಧ್ಯಂತರ ಬಜೆಟ್‌ನಲ್ಲಿ ತಮಿಳುನಾಡಿಗೆ ಅಗತ್ಯ ಹಣ ಹಂಚಿಕೆ ಮಾಡದಿರುವ ಕೇಂದ್ರದ ವಿರುದ್ಧ ಡಿಎಂಕೆಯ ಹಿರಿಯ ನಾಯಕ ಟಿಆರ್ ಬಾಲು ನೇತೃತ್ವದಲ್ಲಿ ಸಂಸತ್ತಿನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುತ್ತಿದ್ದಾರೆ.
ಇತ್ತೀಚಿನ ಚಂಡಮಾರುತ, ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ನಿಭಾಯಿಸಲು ತಮಿಳುನಾಡಿಗೆ ಸೂಕ್ತ ಹಣ ನೀಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಪಕ್ಷಪಾತ’ ಎಂದು ಡಿಎಂಕೆ ಆರೋಪಿಸಿದೆ. (kpc)
