

ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ರವಿವಾರ ಘೋಶಿಸಿದ ಪದಾಧಿಕಾರಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಹೊಸದಾಗಿ ನೇಮಕವಾದ ಕೆಲವು ಪ್ರಮುಖರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡುವ ಮೂಲಕ ಜಿಲ್ಲಾ ಬಿ.ಜೆ.ಪಿ.ಯ ಒಡಕು ಬಹಿರಂಗವಾಗಿದೆ.

ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ.ಯಲ್ಲಿ ಮೂರಕ್ಕೂ ಹೆಚ್ಚು ಗುಂಪುಗಳಿದ್ದು ಅವುಗಳಲ್ಲಿ ಒಂದಕ್ಕೆ ಅನಂತಕುಮಾರ ಹೆಗಡೆ ಮುಖಂಡರಾದರೆ, ಇನ್ನೊಂದಕ್ಕೆ ವಿಶ್ವೇಶ್ವರ ಹೆಗಡೆ ಮತ್ತೊಂದಕ್ಕೆ ರೂಪಾಲಿ ನಾಯ್ಕ. ಈ ಮೂರು ಬಣಗಳಲ್ಲಿ ತೀವ್ರ ಮೇಲಾಟ ಪ್ರಾರಂಭವಾಗಿದ್ದು ಅನಂತಕುಮಾರ ಹೆಗಡೆಯವರಿಗೆ ಟಿಕೇಟ್ ತಪ್ಪಿಸುವ ಪ್ರಯತ್ನದ ಮುಖ್ಯಸ್ಥರಾದ ಕಾಗೇರಿ ವಿಶ್ವೇಶ್ವರ ಹೆಗಡೆ ಬಣ ಸಂಸದ ಅನಂತಕುಮಾರ ಮತ್ತು ರೂಪಾಲಿ ನಾಯ್ಕ ಬಣಕ್ಕೆ ಸವಾಲು ಹಾಕುತಿದ್ದಾರೆ. ಇದೇ ತಿಂಗಳು ಜಿಲ್ಲಾಧ್ಯಕ್ಷರಾಗಿ ನೇಮಕವಾದ ಎನ್. ಎಸ್. ಹೆಗಡೆ ಆಯ್ಕೆ ಬಗ್ಗೆ ಅನಂತಕುಮಾರ ಬಣ ವಿರೋಧ ವ್ಯಕ್ತಪಡಿಸಿದ್ದು ಈಗ ಬಹಿರಂಗ ಗುಟ್ಟು.

ಇದರ ಮುಂದುವರಿಕೆ ಎಂಬಂತೆ ಕೆಲವು ಬ್ಲಾಕ್ ಗಳಿಗೆ ತಮ್ಮ ಬೆಂಬಲಿಗರನ್ನು ತಂದು ಕೂರಿಸಿದ ಬಗ್ಗೆ ಕಾಗೇರಿ ಬಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೂಪಾಲಿ ನಾಯ್ಕ ಮತ್ತು ಅನಂತಕುಮಾರ ಹೆಗಡೆ ಬಣಗಳು ಕಾಗೇರಿ ಬಣಕ್ಕೆ ಸೆಡ್ಡು ಹೊಡೆದು ಪಕ್ಷದ ಸಂಘಟನೆಯ ಏಕಸ್ವಾಮ್ಯತ್ವದ ಬಗ್ಗೆ ತಕರಾರು ಎತ್ತಿದ್ದಾರೆ. ಇದರ ಭಾಗವಾಗಿ ಸಿದ್ಧಾಪುರ ತಾಲೂಕಾ ಮಂಡಳದ ಪ್ರಧಾನ ಕಾರ್ಯದರ್ಶಿ ಸುರೇಶ್ ಮೇಸ್ತ, ಜಿಲ್ಲಾ ಆಹ್ವಾನಿತರಾದ ನಾಗರಾಜ್ ನಾಯ್ಕ ಬೇಡ್ಕಣಿ ಮತ್ತು ಕೃಷ್ಣಮೂರ್ತಿ ಮಡಿವಾಳ ಕಡಕೇರಿ ತಮ್ಮ ರಾಜೀನಾಮೆ ಪ್ರಕಟಿಸಿದ್ದಾರೆ.

ರವಿವಾರ ಪ್ರಕಟವಾದ ಜಿಲ್ಲಾ ಬಿ.ಜೆ.ಪಿ. ಪಟ್ಟಿಯಲ್ಲಿ ಈಗ ರಾಜೀನಾಮೆ ನೀಡಿರುವ ಮೂವರು ಸ್ಥಾನ ಪಡೆದಿದ್ದರು. ಆದರೆ ಸಿದ್ಧಾಪುರ ತಾಲೂಕಾ ಮಂಡಳಕ್ಕೆ ತಿಮ್ಮಪ್ಪ ಮಡಿವಾಳ ಆಯ್ಕೆ ಬಗ್ಗೆ ಅಸಮಾಧಾನಗೊಂಡಿರುವ ಈ ಪ್ರಮುಖರು ತಿಮ್ಮಪ್ಪ ಮಡಿವಾಳ ವಲಸಿಗರು ಇವರ ನೇತೃತ್ವದಲ್ಲಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಸ್ವಾಭಿಮಾನದಿಂದ ಕೆಲಸ ಮಾಡುವುದು ಕಷ್ಟ. ಪಕ್ಷ ಅರ್ಹರನ್ನು ಕಡೆಗಣಿಸಿ ಈ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ತಮ್ಮ ರಾಜೀನಾಮೆ ಘೋಶಿಸಿರುವುದಾಗಿ ಅವರ ಮಾಧ್ಯಮ ಹೇಳಿಕೆ ಸ್ಪಷ್ಟಪಡಿಸಿದೆ.
