

ಸಿದ್ದಾಪುರ: ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿರುವ ಸಿಬ್ಬಂದಿ ಕೊರತೆಯ ಕುರಿತಂತೆ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ವೇಳೆ ಸದನದ ಗಮನ ಸೆಳೆದು ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಆಡಳಿತಾತ್ಮಕವಾಗಿ ತುಂಬಾ ತೊಂದರೆಯಾಗುತ್ತಿದೆ. ತಕ್ಷಣ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆಗ್ರಹಿಸಿದರು.
ಇದಕ್ಕೆ ಉನ್ನತ ಶಿಕ್ಷಣ ಸಚಿವರು ಉತ್ತರಿಸಿ, ಗ್ರೂಫ್ ಬಿ ವೃಂದದಲ್ಲಿ ಪ್ರಸ್ತುತ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಶಿರಸಿ ಹಾಗೂ ಸಿದ್ದಾಪುರ ಕಾಲೇಜಿಗೆ ಇಬ್ಬರು ಬೆರಳಚ್ಚುಗಾರರು ಹಾಗೂ 4 ಗ್ರೂಫ್ ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ವಿಷ್ಣು ನಾಯ್ಕ ನಿಧನಕ್ಕೆ ಭೀಮಣ್ಣ ಸಂತಾಪ
ಸಿದ್ದಾಪುರ: ನಾಡಿನ ಹಿರಿಯ ಸಾಹಿತಿ ಹಾಗೂ ಖ್ಯಾತ ಬರಹಗಾರರಾಗಿದ್ದ ವಿಷ್ಣು ನಾಯ್ಕ ನಿಧನಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಂತಾಪ ಸೂಚಿಸಿದ್ದಾರೆ.
ಅಂಕೋಲಾ ತಾಲೂಕಿನ ಅಂಬಾರಕೊಡ್ಲ ನಿವಾಸಿಯಾಗಿದ್ದ ವಿಷ್ಣು ನಾಯ್ಕ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಬರಹಗಾರರಾಗಿ, ಪ್ರಕಾಶಕರಾಗಿ ಅಕ್ಷರ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಅವರು ಉತ್ತಮ ಶಿಕ್ಷಕರಾಗಿಯೂ ಹೆಸರು ಮಾಡಿದ್ದರು. ವಿಷ್ಣು ನಾಯ್ಕ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಕರುನಾಡಿಗೆ ನೀಡಿದ ಸಾಹಿತ್ಯಾತ್ಮಕವಾದ ಕೊಡುಗೆಯನ್ನು ಸ್ಮರಿಸುತ್ತಾ ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ.

