ಹಾಲಕ್ಕಿ ಸಮಾಜದಲ್ಲಿ ಅವ್ವನನ್ನು ಹುಡುಕುತಿದ್ದ ಒಬ್ಬ ಪೋರ ಅಮ್ಮನೊಂದಿಗೆ ಮದುವೆಗೆ ಹೊರಡಲು ಸಿದ್ಧನಾಗುತ್ತಾನೆ. ಮದುವೆಮನೆಗೆ ಬಣ್ಣ ಬಣ್ಣದ ಬಟ್ಟೆತೊಟ್ಟು ಬಂದ ಹತ್ತು ವರ್ಷದ ಹುಡುಗನ ಪೋಷಾಕು ೧೫ ವರ್ಷ ಮೇಲ್ಪಟ್ಟವರದ್ದು ಓರಿಗೆಯ ಹುಡುಗರ ಗೇಲಿಗೆ ಮುಖಕೊಡಲಾಗದ ಅಸಹಾಯಕ ಹುಡುಗ ಮದುವೆಮನೆಯಿಂದ ಕಾಲ್ಕೀಳುತ್ತಾನೆ, ಅವ್ವನಿಗೆ ಹೇಳದೆ!
ಈ ಅವಮಾನದ ಮುಂದೆ ಮತ್ತಿನ್ನಾವ ಅಪಮಾನ?
ಈ ಹುಡುಗ ಅಂಬಾರಕೊಡ್ಲಿನ ವಿಷ್ಣು ಇಂಥ ಅವಮಾನ, ಅಸಹಾಯಕತೆಯ ನಡುವೆ ಕೇರಿಯಲ್ಲಿ ಗುಮಟೆಪಾಂಗ್ ಹಾಡುತ್ತಾ ರೈತ ಹೋರಾಟದ ತಾಲೀಮು ನಡೆಸುತಿದ್ದ ಭಾವನೊಂದಿಗೆ ಜೊತೆಗಾರನಾಗುವ ವಿಷ್ಣು ದಿನಕರ ದೇಸಾಯಿಯವರ ಕೂಟ ಸೇರುತ್ತಾನೆ. ಶಿಕ್ಷಣ,ಹೋರಾಟ,ಪ್ರತಿಭಟನೆ ಮಾಡುತ್ತಾ ಒಂದೊಂದೇ ಮೆಟ್ಟಿಲೇರುವಾಗ ಇವನ್ಯಾರೆಂದು ಲಕ್ಷಿಸಿದವರೂ ಇಲ್ಲ. ಆದರೆ, ಮುಂದೆ ಇದೇ ವಿಷ್ಣು ಅವತಾರವಾಗಿ ಉತ್ತರ ಕನ್ನಡ ದುಡಿಯುವ ಕೈಗಳ ಹೋರಾಟದ ಕತೆ ಬರೆಯುತ್ತಾರೆ. ಇವರೇ ವಿಷ್ಣು ನಾಯ್ಕ ಅಂಬಾರಕೊಡ್ಲ.
ಅಂಬಾರಕೊಡ್ಲದ ಹಾಲಕ್ಕಿ, ದೀವರ ಕೊಪ್ಪದಲ್ಲಿ ಗೇಣಿದಾರರ ಮಕ್ಕಳು ಮೆರವಣಿಗೆ ಹೊರಟಿದ್ದೇನೋ ಖರೆ ಆದರೆ ಗೇಣಿದಾರರ ಮಗ ವಿಷ್ಣು ರೈತ ಹೋರಾಟದಲ್ಲಿ ಪಾಲ್ಗೊಂಡು, ಜನನಾಯಕ ದಿನಕರ ದೇಸಾಯಿಯವರ ಆಪ್ತ, ಸಹಾಯಕ, ಅಭಿಮಾನಿಯಾಗಿ ಬದುಕು ಪ್ರಾರಂಭಿಸಿದಾಗ ಈ ಹುಡುಗ ಉತ್ತರ ಕನ್ನಡದ ಕಿರೀಟಕ್ಕೆ ಬಣ್ಣದ ಗರಿಯಾಗುತ್ತಾನೆ ಎನ್ನುವುದನ್ನು ಸಾಕ್ಷಾತ್ ದಿನಕರ ದೇಸಾಯಿಯವರೂ ಊಹಿಸಿರಲಿಕ್ಕಿಲ್ಲ. ಆದರೆ ಕವಿ, ಹೋರಾಟಗಾರ,ಸಾಹಿತಿ ವಿಷ್ಣು ನಾಯ್ಕ ಸಾಗಿದ ಹಾದಿ ಮಾತ್ರ ಸದಾ ಅನುಕರಣೀಯ.
ದಿನಕರ ದೇಸಾಯಿಯವರ ಜನಪರತೆ, ಬದ್ಧತೆ, ಪ್ರಾಮಾಣಿಕತೆಯನ್ನು ರೂಢಿಸಿಕೊಂಡ ವಿಷ್ಣು ಶಿಕ್ಷಕರಾದರು, ಪ್ರಾಂಶುಪಾಲರಾದರು, ಕೆನರಾ ವೆಲ್ಫೇರ್ ಟ್ರಸ್ಟ್ ನಿರ್ಧೇಶಕರಾದರು. ಕಂಚಿನ ಕಂಠದ ವಿಷ್ಣು ಮಕ್ಕಳಿಗೆ ಮಧುರವಾಗಿ ಮತನಾಡಿದರು. ಟೀಕಾಕಾರರಿಗೆ ಮೌನ, ತಾತ್ಸಾರದಲ್ಲಿ ಉತ್ತರ ನೀಡಿದರು. ಹೊಸಹುಡುಗರಿಗೆ ದೀನದಲಿತರು, ಬಡವರು, ಅಸಹಾಯಕರ ಪರ ಪಕ್ಷಪಾತ ಮಾಡಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಮೂಲ ಸಮಸ್ಯೆ ಅರಿತು ಮಾತನಾಡುವುದನ್ನು ಕಲಿಸಿದರು. ಅನೇಕರಿಂದ ಕವಿತೆ ಬರೆಸಿ ಸಂಕಲನ ಮಾಡಿದರು. ಉತ್ತರ ಕನ್ನಡದ ರೈತ ಸಂಕಥನ ದಾಖಲಿಸಿದರು, ಅದಕ್ಕೆ ದುಡಿಯುವ ಕೈಗಳ ಹೋರಾಟದ ಕತೆ ಎಂದು ಶೀರ್ಷಿಕೆ ಇಟ್ಟರು. ಮುಗ್ಧ ಹಾಲಕ್ಕಿಗಳ ಬದುಕಿನ ಜಂಗುಂ-ಜಕ್ಕುಂ ಶಬ್ಧವನ್ನು ಹಿಮಾಲದವರೆಗೆ ಪರಿಚಯಿಸಿದರು. ಅವರ ಪ್ರಕಾಶನದ ವೇದಿಕೆ ಏರಿ ಆತಿಥ್ಯ ಉಣ್ಣದ ಹಿರಿಕಿಯರೇ ಇಲ್ಲ. ನಾಮಧಾರಿ- ನಾಡವರ ನಡುವೆ ಸೇತುವೆ ಕಟ್ಟಿದರು. ಜಾತಿ-ಧರ್ಮ ಭೇದ ಮರೆತು ಎಲ್ಲರನ್ನೂ ಒಂಡೆದೆ ಸೇರಿಸಿದರು.
ಇಂಥ ಜೀವಮಾನದ ಸಾಧಕನಿಗೆಅರಸಿ ಬಂದ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಜಿಲ್ಲೆಯ ಸಾಹಿತ್ಯ ಪರಿಷತ್ತಿನ ತೇರು ಎಳೆದರು. ಸಂಘಟಕರಾಗಿ,ಸಾಹಿತಿಯಾಗಿ, ಹಿರಿಯ ಕವಿಯಾಗಿ, ಪ್ರಸಿದ್ಧ ಪ್ರಕಾಶಕರಾಗಿ ಉತ್ತಮ ವಾಕ್ಪಟುವಾಗಿ ಇಡೀ ಜಿಲ್ಲೆ, ರಾಜ್ಯ, ದೇಶ ಸುತ್ತಿದರು.
ಮದುವೆ ಕಾರ್ಯಕ್ಕೆ ಹೋಗಲು ಬಟ್ಟೆಗಾಗಿ ಖಾತರಿಸಿದ್ದ ವಿಷ್ಣು ಮನೆಗೆ ಮಗನಾಗಿ, ಕುಟುಂಬಕ್ಕೆ ಹಿರಿಣ್ಣನಾಗಿ ಸಮಾಜ, ಕುಟುಂಬ, ಜಾತಿ-ಧರ್ಮ, ಸಾಹಿತ್ಯ, ಸಾಂಸ್ಕೃತಿಕತೆ ಎಲ್ಲೆಲ್ಲೂ ವಿಸ್ತರಿಸಿ ಅಸ್ತಂಗತರಾಗುವ ೮೦ ವರ್ಷಗಳ ಅವಧಿಯಲ್ಲಿ ಅವರು ಮಾಡಿದ್ದು ೮೦೦ ವರ್ಷಗಳ ಕೆಲಸ! ಅವರು ಉತ್ತರ ಕನ್ನಡಕ್ಕೆ ಸಿಕ್ಕಿದ್ದು-ದಕ್ಕಿದ್ದೇ ಜಿಲ್ಲೆಯ ವರ. ಪರಿಮಳದಂಗಳದ ಕಸ್ತೂರಿ ಅಂಬಾರಕೊಡ್ಲಿನ ಬೀದಿಯಿಂದ ಅಂಬರದತ್ತ ವಿಸ್ತರಿಸಿ ಅನೇಕರಿಗೆ ನೆರಳುನೀಡಿದ ಬಾಳಮರ.