ಸಿದ್ಧಾಪುರ-ಶಿರಸಿ ನಡುವಿನ ಕಾನಸೂರು ಎರಡ್ಮೂರು ತಾಲೂಕುಗಳ ಜನರಿಗೆ ಕೇಂದ್ರಸ್ಥಳ. ಸೊರಬಾ, ಸಿದ್ಧಾಪುರ, ಶಿರಸಿ ಭಾಗದ ಜನರೂ ಕೂಡಾ ಕಾನಸೂರನ್ನು ಒಂದು ಪ್ರಮುಖ ಕೇಂದ್ರ ಎಂದು ಪರಿಗಣಿಸುತ್ತಾರೆ. ಈ ಕಾನಸೂರಿನಲ್ಲಿ ಅಂದಿನ ಹಿರಿಯರು ೧೯೭೦ ರಲ್ಲಿ ಪ್ರಾರಂಭಿಸಿದ ತಾರೆಹಳ್ಳಿ ಕಾನಸೂರು ವಿವಿದೋದ್ದೇಶ ಪ್ರಾಥಮಿಕಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಕಾನಸೂರು ಪ್ರಾರಂಭವಾಗಿ ೫ ದಶಕಗಳಲ್ಲಿ ಈ ಭಾಗದ ಜನರ ಪ್ರಮುಖ ವ್ಯವಹಾರ, ವಹಿವಾಟಿನ ಕೇಂದ್ರವಾಗಿದೆ.
ಕಾನಸೂರಿನ ಸುತ್ತಮುತ್ತಲಿನ ಜನರ ಜೀವನಾಡಿಯಾಗಿ ಸೇವೆ ನೀಡುತ್ತಿರುವ ಈ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಫೆ ೨೫ ರ ರವಿವಾರ ನಡೆಯಲಿದೆ. ಇಡೀ ದಿನದ ಈ ಸುವರ್ಣ ಸಂಬ್ರಮದ ಅಂಗವಾಗಿ ವಿಶೇಶ ಕಾರ್ಯಕ್ರಮಗಳು ನಡೆಯಲಿದ್ದು ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಉದ್ಘಾಟಿಸಲಿದ್ದಾರೆ.
ಸಂಘದ ಅಧ್ಯಕ್ಷ ಮಂಜುನಾಥ ಜೋಶಿ ಈರಗೊಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭಾ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಸ್ಮರಣ ಸಂಚಿಕೆ ಸುವರ್ಣ ಸಹಕಾರ ಲೋಕಾರ್ಪಣೆ ಮಾಡಲಿದ್ದಾರೆ. ಅನೇಕ ಅತಿಥಿ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮ ಈ ಭಾಗದ ಅದ್ಧೂರಿ ಕಾರ್ಯಕ್ರಮ ಎನಿಸಿದೆ.
ಸಂಗೀತ ಕಾರ್ಯಕ್ರಮ, ಯಕ್ಷಗಾನಗಳಿಂದ ಮುಕ್ತಾಯವಾಗಲಿರುವ ಈ ಸುವರ್ಣಮಹೋತ್ಸವ ಕಾರ್ಯಕ್ರಮ ಈ ಭಾಗದ ಸಹಕಾರಿಗಳ ಸೇವೆ ಸ್ಮರಣೆಗೆ ವೇದಿಕೆಯೂ ಆಗಲಿದೆ.