


ಮನ್ಮನೆ ಶಾಲೆಯ ಶಾಲಾಭಿವೃದ್ಧಿ ಸಮೀತಿ ಪೆಂಡಾಲ್ ಕಟ್ಟಿ ನೂರಾರುಕುರ್ಚಿ ಇಟ್ಟು ವೇದಿಕೆಯ ಮೇಲೆ ಪ್ಲೆಕ್ಸ್ ಬೋರ್ಡ್ ನಲ್ಲಿ ಎಂ.ಎಚ್. ನಾಯ್ಕರಿಗೆ ಬೀಳ್ಕೊಡುಗೆ ಎಂದು ಬರೆಸಿ, ಎಲ್ಲರೂ ವೇದಿಕೆ ಏರಿ, ನಂತರ ಊಟ ಬಡಿಸಿ ತಮ್ಮ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕರಿಗೆ ಬೀಳ್ಕೊ ಡುಗೆ ಏರ್ಪಡಿಸಿದ್ದರು.
ಶಿಕ್ಷಕರೆಲ್ಲಾ ತಮ್ಮ ಮುಖ್ಯ ಶಿಕ್ಷಕ ಎಂ. ಎಚ್. ನಾಯ್ಕ ರ ಸಹನೆ, ತಾಳ್ಮೆ, ಶಿಸ್ತು, ಸಮಯಪಾಲನೆ ಬಗ್ಗೆ ಮಾತನಾಡಿದರು.
ಊರಿನಮುಖಂಡರಾದ ಗಣೇಶ್ ನಾಯ್ಕ, ವಸಂತ ನಾಯ್ಕ ,ನಾಗರಾಜ್ ನಾಯ್ಕ, ಆನಂದ ನಾಯ್ಕ ಸೇರಿದಂತೆ ಎಲ್ಲರೂ ಶಿಕ್ಷಕ ಎಂ.ಎಚ್.ನಾಯ್ಕ ಬಗ್ಗೆ ಪ್ರಶಂಸಿಸಿ ಮಾತನಾಡಿದರು.
ಬಾಲಿಕೊಪ್ಪ ಶಾಲೆಯ ಶಿಕ್ಷಕ ಎಸ್.ಜಿ. ನಾಯ್ಕ, ಎಂ.ಎಚ್. ನಾಯ್ಕರ ಪತ್ನಿ ವಿಜಯಾ ನಾಯ್ಕರು ತನು-ಮನ ದಲ್ಲಿ ಶಾಲೆಯನ್ನೇ ಧ್ಯಾನಿಸುತ್ತಿರುವ ಬಗ್ಗೆ ಹೇಳಿದರು. ನೂರಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗಿಫ್ಟ್ ನೀಡಿ ಶುಭಕೋರಿದರು.
ಈ ಸುಂದರ ಕಾರ್ಯಕ್ರಮ ನೋಡಿದ ನನಗೆ ಡಾ. ಅಬ್ದುಲ್ ಕಲಾಂ ರಾಮೇಶ್ವರಕ್ಕೆ ಬಂದು ತನ್ನ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಗೌರವಿಸಿದ್ದು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುವೆಂಪು ರಿಂದ ಆಶೀರ್ವಾದ ಪಡೆದದ್ದನ್ನು ನೆನಪಿಸಿತು. ಅದನ್ನೇ ಬಣ್ಣಿಸಿ ಮುಂದೆ ಇಲ್ಲಿಯ ಮಕ್ಕಳು ಹೀಗೆ ಇಲ್ಲಿಯ ಶಿಕ್ಷಕರನ್ನು ಗೌರವಿಸುವಂತಾಗಲಿ ಎಂದು ಆಶಿಸಿ ಎಂ.ಎಚ್. ನಾಯ್ಕರಿಗೆ ಶುಭ ಕೋರಿದೆ.
ಕೊನೆಗೆ ದಂಗಾಗುವ ಸರದಿ ನಮ್ಮದಾಗಿತ್ತು. ಎಂ.ಎಚ್. ನಾಯ್ಕ ಮಾತನಾಡುತ್ತಾ ತನ್ನ ತಾಯಿ ಚಿಕ್ಕಂದಿನಲ್ಲಿ ಸತ್ತು ಹೋಗಿದ್ದು, ನಂತರ ತಂದೆ ತಾನು ಕೆಲಸ ಮಾಡುತಿದ್ದ ಊರಿನ ಬಿಡಾರದಲ್ಲಿ ಬಾಲಕ ಎಂ.ಎಚ್. ನಾಯ್ಕ ಮತ್ತು ಅವರ ಅಕ್ಕನನ್ನು ಬಿಟ್ಟು ಹೋಗಿದ್ದು. ನಂತರ ಅಕ್ಕ ಮದುವೆಯಾಗಿ ಹೋಗಿದ್ದು,ತನ್ನನ್ನು ಬ್ರಾಹ್ಮಣರೊಬ್ಬರು ತಮ್ಮ ಸ್ವಂತ: ಮಗನಂತೆ ಸಾಕಿದ್ದು………
ಅನಾಥನಂತೆ ಪ್ರಾರಂಭವಾದ ಬದುಕು ಬಡತನದಲ್ಲಿ ಮುಳುಗಿ ನಂತರ ಶಿಕ್ಷಕನಾಗಿ ಬದುಕು ಕಟ್ಟಿಕೊಂಡದ್ದು…….
ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತಮ್ಮ ಮಕ್ಕಳಂತೆ ಭಾವಿಸಿದ್ದು….
ಬೆಳಿಗ್ಗೆ ೧೧.೩೦ ರಿಂದ ಪ್ರಾರಂಭವಾದ ಕಾರ್ಯಕ್ರಮ ೨.೩೦ ರ ವರೆಗೆ ಮುಂದುವರೆದರೂ ಈ ಕಾರ್ಯಕ್ರಮದ ಸೊಬಗಿನ ಮಧ್ಯೆ ಹಸಿವು ಮಾಯವಾಗಿದ್ದು…ಇಂಥದ್ದೊಂದು ಹೃಯಸ್ಫರ್ಶಿ ಬೀಳ್ಕೊಡುಗೆ ಮಾಡಿಸಿಕೊಂಡ ಮಿ.ಪರಫೆಕ್ಟ್ ಎಂ.ಎಚ್. ನಾಯ್ಕ ಬಗ್ಗೆ ಮುಂದೆಂದಾದರು ಬರೆದೇನು. ಮನ್ಮನೆ ಗ್ರಾಮದ ಜನರ ಬಗ್ಗೆ ಗೌರವ, ಅಭಿಮಾನ ಉಕ್ಕಲು ಸದ್ಯ ಇಷ್ಟು ಸಾಕು.
