

ಶುಕ್ರವಾರ, ಶನಿವಾರ ಉತ್ತರ ಕನ್ನಡ ಎದ್ದೇಳು ಅಭಿಯಾನದ ಪ್ರವಾಸ ಸಂಪನ್ನ

ಮತಾಂಧತೆ,ಸರ್ವಾಧಿಕಾರ ತೊಲಗಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಎದ್ದೇಳು ಕರ್ನಾಟಕ ಅಭಿಯಾನದ ರಾಜ್ಯ ಪ್ರವಾಸ ಪ್ರಾರಂಭಗೊಂಡಿದೆ. ಗುರುವಾರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಿದ ಎದ್ದೇಳು ಕರ್ನಾಟಕ ಅಭಿಯಾನದ ರಾಜ್ಯ ಪ್ರವಾಸ ಕಾರ್ಯಕ್ರಮ ಇಂದು ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದು ಶುಕ್ರವಾರ ಶಿರಸಿ ಮತ್ತು ಸಿದ್ಧಾಪುರಗಳಲ್ಲಿ ತನ್ನ ಸಂವಾದ ಕಾರ್ಯಕ್ರಮ ನಡೆಸಿತು.

ಎದ್ದೇಳು ಕರ್ನಾಟಕದ ರಾಜ್ಯ ಸಂಚಾಲಕ ಕೆ.ಎಲ್. ಅಶೋಕ್ ನೇತೃತ್ವದಲ್ಲಿ ನಡೆದ ಸಿದ್ಧಾಪುರದ ಎದ್ದೇಳು ಉತ್ತರ ಕನ್ನಡ ಕಾರ್ಯಕ್ರಮ ಸಾಮಾಜಿಕ ಕಾರ್ಯಕರ್ತ ಕೋಲಶಿರ್ಸಿ ಕನ್ನೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶ ಬಿಕ್ಕಟ್ಟಿನಲ್ಲಿದೆ. ಇಂಡಿಯಾದ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕೆಂದರೆ ದೇವರು, ಧಾರ್ಮಿಕತೆಯ ಹೆಸರಿನ ಮತಾಂಧ ರಾಜಕಾರಣ ಕೊನೆಯಾಗಬೇಕು ಈ ಪ್ರಯತ್ನಗಳಿಗೆಲ್ಲಾ ಬೆಂಬಲಿಸುವವರು ಎದ್ದೇಳು ಕರ್ನಾಟಕ ಅಭಿಯಾನದ ಭಾಗವಾಗಬೇಕು ಎಂದರು.

ಈ ಸಂವಾದದಲ್ಲಿ ಪಾಲ್ಗೊಂಡ ಎಂ. ವಿಠ್ಠಲ್ ಅವರಗುಪ್ಪಾ, ಎನ್.ಟಿ.ನಾಯ್ಕ ದ್ಯಾವಾಸ, ಬಾಬು ನಾಯ್ಕ ಕಡಕೇರಿ,ಬಾಬು ಹರಕನಳ್ಳಿ, ಗಣಪತಿ ನಾಯ್ಕ, ಅಶೋಕ ನಾಯ್ಕ, ಸೇರಿದಂತೆ ಅನೇಕರು ಎದ್ದೇಳು ಕರ್ನಾಟಕದ ಬಗ್ಗೆ ಮೆಚ್ಚುಗೆಯ ಮಾತನಾಡಿ ದೇಶ ಉಳಿಸುವ ಈ ಕೆಲಸ ನಮ್ಮ ಆದ್ಯತೆಯಾಗಬೇಕು ಎಂದರು.
Sirsi- ಶಿರಸಿ ವರದಿ- ಶಿರಸಿಯಲ್ಲಿ ಕೂಡಾ ಎದ್ದೇಳು ಉತ್ತರ ಕನ್ನಡ ಸಂವಾದ ಕಾರ್ಯಕ್ರಮ ನಡೆಯಿತು. ವಕೀಲ ಎಂ.ಎನ್. ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕರು ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು. ಶಿರಸಿ-ಸಿದ್ಧಾಪುರಗಳಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕ ಸಂಚಾಲಕ ಕೆ.ಎಲ್. ಅಶೋಕ. ವಿಶ್ವದಾದ್ಯಂತ ಈಗ ಮತಾಂಧತೆ, ಕಾರ್ಪೋರೆಟ್ ಜನರ ಸರ್ವಾಧಿಕಾರ ಪ್ರಾರಂಭವಾಗಿದೆ. ಇಂಡಿಯಾದಲ್ಲೂ ದೇವರು, ಧರ್ಮ ಬಳಸಿಕೊಂಡು ರಾಜಕೀಯ ಅಧಿಕಾರ ಹಿಡಿಯುವವರು ಬಡಜನರ ವಿರೋಧಿ ಖಾಸಗಿ ಸರ್ವಾಧಿಕಾರ ಸ್ಥಾಪನೆಗೆ ಹೊರಟಿದ್ದಾರೆ.
ಇಂಥ ಮತಾಂಧ ಶಕ್ತಿಗಳಿಂದ ಭಾರತದ ಸ್ವಾತಂತ್ರ್ಯ ಹರಣ, ಪ್ರಜಾಪ್ರಭುತ್ವ, ಸಂವಿಧಾನಗಳಿಗೆ ಅಪಾಯ ಬಂದಿದೆ. ಮುಂದಿನ ಐವತ್ತು ವರ್ಷಗಳ ಒಳತಿಗೆ ಈಗಿನ ೫೦ ದಿನಗಳ ಕೆಲಸ ಮಹತ್ವದ್ದು ಸಾಮಾಜಿಕ ನ್ಯಾಯದ ಬಹುತ್ವದ ಸರ್ಕಾರ ಸ್ಥಾಪನೆಯಾಗಲು ಇಂಡಿಯಾ ಸಿದ್ಧವಾಗಿದ್ದು ಸರ್ವಾಧಿಕಾರಿ ಮತಾಂಧ ಶಕ್ತಿಗಳಿಗೆ ಹಿನ್ನಡೆಯಾದರೆ ದೇಶದ ಭವಿಷ್ಯ ಉತ್ತಮಗೊಳ್ಳಲಿದೆ. ಇದರ ಹಿನ್ನೆಲೆಯಲ್ಲಿ ಎದ್ದೇಳು ಕರ್ನಾಟಕ ಕೆಲಸ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮಗಳಲ್ಲಿ ರಾಜು ಭದ್ರಾವತಿ, ರಹಮತ್,ಎಚ್.ಬಿ. ರಾಘವೇಂದ್ರ,ಕೋಲಶಿರ್ಸಿ ಕನ್ನೇಶ್, ಕೆ. ರಮೇಶ್, ನರೇಂದ್ರ ನಾಯ್ಕ, ಸುರೇಂದ್ರ,ಆರ್.ಬಿ.ನಾಯ್ಕ, ಮಹೇಶ್ ನಾಯ್ಕ ಸೇರಿದಂತೆ ಅನೇಕರಿದ್ದರು.

