


ಸಿದ್ದಾಪುರ: ಪಟ್ಟಣದ ಕನ್ನಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಮಧ್ಯಾಹ್ನ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.
ನಿವೃತ್ತ ಶಿಕ್ಷಕರು ಹಾಗೂ ಯೋಧರನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಣ ಯಾರೊಬ್ಬರ ಸ್ವತಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರ ಕೋಟ್ಯಂತರ ರು ಖರ್ಚು ಮಾಡಿ ಶಿಕ್ಷಣ ನೀಡುತ್ತಿದ್ದರೂ ಸಹ ದೇಶದಲ್ಲಿ ಶಿಕ್ಷಣ ಪಡೆದವರ ಪ್ರಮಾಣ 80% ರಷ್ಟು ಮಾತ್ರ ಇದೆ. ದೇಶ ರಾಮರಾಜ್ಯವಾಗಬೇಕಾದರೆ ಎಲ್ಲರೂ ಶಿಕ್ಷಣ ಪಡೆಯಬೇಕು. ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೆ ಪಾಲಕರು ಮಕ್ಕಳನ್ನು ಕಳಿಸಬೇಕು ಎಂದು ಕರೆ ನೀಡಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ವಸಂತಲಕ್ಷ್ಮೀ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ಸದಸ್ಯ ನಂದನ ಬೋರಕರ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿಷ್ಣು ನಾಯ್ಕ, ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ, ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಶೇಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಉಪಸ್ಥಿತರಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಸ್ವಾಗತಿಸಿ-ಪ್ರಾಸ್ತಾವಿಕ ಮಾತನಾಡಿದರು.
