

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಜನಸಂಖ್ಯೆ ಮತ್ತು ಮತದಾರರಾಗಿರುವ ನಾಮಧಾರಿ, ಧೀವರು ಹಳೆಪೈಕ ಸಮೂದಾಯ ರಾಜಕೀಯ,ಸಾಮಾಜಿಕ ಪ್ರಾತಿನಿಧ್ಯವಿಲ್ಲದೆ ಬಳಲಲು ಇಲ್ಲಿಯ ರಾಜಕೀಯ ಹಿತಾಸಕ್ತಿ ಕಾರಣವೆ ಎನ್ನುವ ಚರ್ಚೆಯೊಂದು ಪ್ರಾರಂಭವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ನಾಲ್ಕೈದು ಲಕ್ಷಗಳಷ್ಟು ಜನಸಂಖ್ಯೆಯ ಸಮೂದಾಯಕ್ಕೆ ರಾಜಧಾನಿ ಮಟ್ಟದಲ್ಲಿ ನಾಮಧಾರಿ ಸಂಘ ಅಸ್ಥಿತ್ವದಲ್ಲಿದೆಯಾದರೂ ಅದರ ಜೊತೆ ಸಂಬಂಧ ಹೊಂದಿರುವ ಸಂಘ ಉತ್ತರ ಕನ್ನಡದಲ್ಲಿದ್ದಂತಿಲ್ಲ. ದೀವರು, ಬಿಲ್ಲವ ನಾಮಧಾರಿ, ಹಳೆಪೈಕರ ಸಮಾನ ಸಮೂದಾಯಗಳಾದ ಈಡಿಗರ ಒಟ್ಟೂ ೨೬ ಉಪಪಂಗಡಗಳು ಸೇರಿವೆಯಾದರೂ ಈ ಎಲ್ಲಾ ಸಂಘಗಳನ್ನು ಪ್ರತಿನಿಧಿಸುವ ಏಕೈಕ ಮಾತೃ ಸಂಘಟನೆ ಈ ವರೆಗೂ ಅಸ್ಥಿತ್ವಕ್ಕೇ ಬಂದಿಲ್ಲ.
೧೯೭೦-೮೦ ರ ದಶಕದಲ್ಲಿ ಪರಿಶಿಷ್ಟ ಗುಂಪಿಗೆ ಸೇರಬೇಕಿದ್ದ ಈಡಿಗ, ದೀವರು, ಬಿಲ್ಲವರ ಸಂಘವನ್ನು ಸಮೂದಾಯದಲ್ಲಿಟ್ಟು ಅವು ಪರಿಶಿಷ್ಟರ ಯಾದಿಗೆ ಬರದಂತೆ ತಡೆದವರು ಈ ಸಮೂದಾಯದ ಪ್ರಮುಖರಾದ ಕಾಗೋಡು ತಿಮ್ಮಪ್ಪ ಮತ್ತು ಎಸ್. ಬಂಗಾರಪ್ಪ. ಈ ಇಬ್ಬರ ಈಡಿಗರ ರಾಜಕೀಯ ಶಕ್ತಿ-ಸಂಬಂಧಗಳ ಹಿನ್ನೆಲೆಯಲ್ಲಿ ಪರಿಶಿಷ್ಟರ ಯಾದಿ ಸೇರದ ಈಡಿಗರ ಸಮೂದಾಯ ಆ ಕಾಲದಲ್ಲಿ ರಾಜಕೀಯ ಶಕ್ತಿಯಾಗಿ ಪ್ರತಿಬಿಂಬಿತವಾಗಿದ್ದು ಸತ್ಯ. ಆದರೆ ಅದರ ನಂತರ ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದ ಕೆಲವು ಜಿಲ್ಲೆಗಳ ದೀವರು ಈಡಿಗರೊಂದಿಗೆ ಸೇರಿಹೋಗಿದ್ದೂ ಹೌದು. ಆದರೆ ಇತರ ಜಿಲ್ಲೆಗಳಲ್ಲಿ ಈಡಿಗರ ಸಂಘಟನೆಯೊಂದಿಗೆ ಸಂಪೂರ್ಣವಾಗಿ ಸೇರದ ಕೆಲವು ಸಂಘಟನೆಗಳು ಸ್ವತಂತ್ರವಾಗಿ ಹೊರಗುಳಿದವು. ಹೀಗೆ ಜಾತಿ ಸಂಘದ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಎರಡ್ಮೂರು ಸಂಘ, ಸಂಘಟನೆಗಳಿದ್ದರೆ ಹೊರ ಜಿಲ್ಲೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ.
ಇಂಥ ಅಸ್ಫಷ್ಟತೆಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ಧಾಪುರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ನಾಮಧಾರಿ ಸಂಘಗಳು ಸ್ವತಂತ್ರವಾಗಿ ಅಸ್ಥಿತ್ವದಲ್ಲಿವೆ. ಈ ಸ್ವತಂತ್ರ ಅಸ್ಥಿತ್ವದ ಸಂಘಗಳು ಜಿಲ್ಲಾ ಮಟ್ಟದಲ್ಲಿ ಒಟ್ಟಾಗಿ ಒಂದೇ ಸಂಘ ರಚಿಸಿಕೊಂಡಿಲ್ಲ. ಇಂಥ ಸ್ವತಂತ್ರ ಅಸ್ಥಿತ್ವದ ತಾಲೂಕು- ಜಿಲ್ಲಾಸಂಘಗಳು ಆಯಾ ಕಾಲದ ರಾಜಕೀಯ ಶಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದು ವಿಚಿತ್ರ ಇಂಥ ಸಂದರ್ಭದಲ್ಲಿ ಸಿದ್ಧಾಪುರದಲ್ಲಿ ಅಸ್ಥಿತ್ವಕ್ಕೆ ಬಂದ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ ೧೯೯೨ ರಲ್ಲಿ ಸ್ಥಾಪನೆಯಾಗಿ ಎರಡು ದಶಕಗಳಲ್ಲಿ ಹತ್ತು ಕೋಟಿಗೂ ಮಿಕ್ಕಿದ ಆಸ್ತಿ- ವ್ಯವಹಾರ ಮಾಡಿದ್ದು ವಿಶೇಶ.
ಇಂಥ ಸಂಘದ ಅಂಗಳದಲ್ಲಿ ಚಿಕ್ಕ ಸಂಚಲನೆಯಾಗಿ ಈ ಸಂಘಗಳ ಜೊತೆಗೆ ಸಂಪರ್ಕ- ಸಂಬಂಧವೇ ಇಲ್ಲದ ಬಿ.ಎಸ್. ಎನ್.ಡಿ.ಪಿ. ಸಂಘಟನೆಯ ಅಧ್ಯಕ್ಷರಾಗಿದ್ದವರೊಬ್ಬರು ಸಂಘದ ವಿಚಾರವನ್ನು ಬಹಿರಂಗಪಡಿಸಿ ಗೊಂದಲ ಹುಟ್ಟಿಸಿದರೆಂದು ಹಲ್ಲೆಯಾದ ಬಗ್ಗೆ ಪೊಲೀಸ ಪ್ರಕರಣ ದಾಖಲಾಗಿದೆ.
ಈ ಘಟನೆ ನಂತರ ನಾಮಧಾರಿ ಅಭಿವೃದ್ಧಿ ಸಂಘ ಮಾಧ್ಯಮಗೋಷ್ಠಿ ಕರೆದು ತನ್ನ ವ್ಯವಹಾರಗಳ ಬಗ್ಗೆ ವಿವರ ನೀಡಿತು. ಈ ಬೆಳವಣಿಗೆಗಳ ನಂತರ ಮತ್ತು ಮೊದಲು ಕೂಡಾ ಸಮೂದಾಯದ ಸಂಘಟನೆಗಳಲ್ಲಿ ನೇರ ರಾಜಕೀಯ ನೇತೃತ್ವ ಸರಿಯೆ? ಎನ್ನುವ ಪ್ರಶ್ನೆ ಎದ್ದಿದೆ. ಸಮೂದಾಯದ ಸಂಘಟನೆ, ಸಂಘಗಳಲ್ಲಿ ರಾಜಕೀಯ ಪ್ರವೇಶ ಸರಿ ಎಂದಾದರೆ ಅದರ ಪೂರಕ- ಮಾರಕ ಅಂಶ ಗಳಿಗೂ ಸಂಘ ಜವಾಬ್ಧಾರಿಯಾಗಬೇಕಾಗುತ್ತದೆ. ಒಂದು ವೇಳೆ ಸಂಘದಲ್ಲಿ ರಾಜಕೀಯ ಪ್ರವೇಶ ಬೇಡ ಎಂದಾದರೆ ಆಗಲೂ ಪೂರಕ- ಮಾರಕ ಅಂಶಗಳಿಗೆ ಜವಾಬ್ಧಾರಿಯಾಗಬೇಕಾಗುತ್ತದೆ. ಸಂಘ, ಸಂಘದ ವ್ಯವಹಾರದ ವಿಚಾರ ಬಹಿರಂಗವಾಗಿ ಬೀದಿರಂಪವಾದರೆ ಆಗಲೂ ಸಂಘವೇ ಜವಾಬ್ಧಾರಿ ವಹಿಸಬೇಕಾಗುತ್ತದೆ.
