


ನದಿ ತೀರದಲ್ಲೊಂದು ವಿನೂತನ ಕಾರ್ಯಕ್ರಮ| ಮೆಚ್ಚುಗೆಗೆ ಕಾರಣವಾದ ಅಘನಾಶಿನಿ ಸಾಂಸ್ಕೃತಿಕ ಸಂಭ್ರಮ
ಮಹಿಳೆಯರು ನೀರಿನ ಬಳಕೆ ಕಡಿಮೆ ಮಾಡಲಿ: ಭೀಮಣ್ಣ ನಾಯ್ಕ್
ಶಿರಸಿ: ಬಿರು ಬೇಸಿಗೆ ಹೆಚ್ಚುತ್ತಿದೆ. ಎಲ್ಲ ಕಡೆ ನೀರಿನ ಅಭಾವ ತೀವ್ರವಾಗುತ್ತಿದೆ. ಮಹಿಳೆಯರು ನೀರಿನ ಬಳಕೆಯನ್ನು ಕಡಿಮೆ ಮಾಡಬೇಕು. ನೀರನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕು ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್ ಕಿವಿಮಾತು ಹೇಳಿದರು.
ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ ವ್ಯಾಪ್ತಿಯ ದಂಟಕಲ್ ಅಘನಾಶಿನಿ ನದಿ ತೀರದಲ್ಲಿ ನಡೆದ ಅಘನಾಶಿನಿ ಸಾಂಸ್ಕೃತಿಕ ಸಂಭ್ರಮ ಎನ್ನುವ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಂಗೀತ ಕಾರ್ಯಕ್ರಮಗಳು ಹೆಚ್ಚಬೇಕು. ಅಘನಾಶಿನಿ ನದಿ ತೀರದಲ್ಲಿ ನಡೆಯುತ್ತಿರುವ ವಿನೂತನವಾದ ಸಾಂಸ್ಕೃತಿಕ ಕಾರ್ಯಕ್ರಮ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.
ಅಘನಾಶಿನಿ ನದಿ ಶಿರಸಿ-ಸಿದ್ಧಾಪುರದವರ ಪಾಲಿಗೆ ಜೀವ ನದಿ. ಈ ನದಿಯನ್ನು ನಂಬಿ ಸಹಸ್ರಾರು ಜನರು ಜೀವನ ನಡೆಸುತ್ತಿದ್ದಾರೆ. ಈ ನದಿಯಲ್ಲಿ ಆತಂಕಕಾರಿಯಾಗಿ ನೀರಿನ ಹರಿವು ಕಡಿಮೆಯಾಗಿದೆ. ಶಿರಸಿ ನಗರಕ್ಕೂ ಈ ನದಿ ನೀರನ್ನು ಉಣ್ಣಿಸುವ ಕಾರ್ಯ ಮಾಡುತ್ತಿದೆ. ಈ ನದಿ ನೀರು ಎಲ್ಲರಿಗೂ ಮುಖ್ಯ. ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಶಿರಸಿ ನಗರವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರು ಅಘನಾಶಿನಿ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಯುವ ಧುರೀಣ ಶ್ರೀಪಾದ ಹೆಗಡೆ ಕಡವೆ ಮಾತನಾಡಿ, ನದಿ ತೀರದಲ್ಲಿ ವೇದಿಕೆ ನಿರ್ಮಿಸಿ, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವ ಮೊದಲ ನಿದರ್ಶನ ಇದು. ಇದೊಂದು ವಿನೂತನ ಕಾರ್ಯಕ್ರಮ. ಇಂತಹ ಅಪರೂಪದ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.
ಅತಿಥಿಗಳಾದ ಕೆ. ಆರ್. ಹೆಗಡೆ ಕಾನಸೂರು ಅವರು ಮಾತನಾಡಿ, ದಂಟಕಲ್ ಭಾಗದ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಎತ್ತಿದ ಕೈ. ಸದಾ ಒಂದಿಲ್ಲೊಂದು ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರು ಇದೀಗ ನದಿ ತೀರದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ಹೊಸತನಕ್ಕೆ ಹೆಜ್ಜೆ ಹಾಕಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾನಸೂರು ಗ್ರಾಮ ಪಂಚಾಯತ ಸದಸ್ಯ ಕೃಷ್ಣಮೂರ್ತಿ ಹೆಗಡೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಗೇಂದ್ರ ಮುತ್ಮುರಡು, ಪತ್ರಕರ್ತ ಪ್ರದೀಪ ಶೆಟ್ಟಿ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಶ್ರೀಕಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ವಿನಯ್ ಹೆಗಡೆ ಪ್ರಸ್ತಾವಿಸಿದರು.
ತೆರೆಮರೆಯ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಔಷಧಿ ನೀಡುತ್ತಾ ಬಂದಿರುವ ನಾಟಿ ವೈದ್ಯ ಸುಬ್ರಾಯ ಹೆಗಡೆ, ಮಸಾಜ್ ಥೆರಪಿ ಮೂಲಕ ಸೀತಾರಾಮ ಹೆಗಡೆ ಸಂಗೊಳ್ಳಿಮನೆ, ಬಾಳಂತಿ ಆರೈಕೆಯಲ್ಲಿ 6 ದಶಕಗಳ ಕಾಲ ಸೇವೆ ಮಾಡಿದ ಜಾನಿ ಗಣಪ ಗೌಡ ಹಾಗೂ ಅಂತಾರಾಷ್ಟ್ರೀಯ ಛಾಯಾಚಿತ್ರಗ್ರಾಹಕ ನಾಗೇಂದ್ರ ಹೆಗಡೆ ಮುತ್ಮುರಡು ಅವರುಗಳನ್ನು ಸನ್ಮಾನಿಸಲಾಯಿತು.
ಜನಮನ ಸೆಳೆದ ಸಂಗೀತ ಕಾರ್ಯಕ್ರಮ
ಕಾವ್ಯಶ್ರೀ ಅನಂತ ಹೆಗಡೆ ಅವರ ಗಾಯನ ಕಾರ್ಯಕ್ರಮ ಸಭಿಕರ ಮನಸ್ಸು ಸೂರೆಗೊಂಡಿತು. ನಂತರ ಅನಂತ ಹೆಗಡೆ ಹಾಗೂ ಅವರ ಶಿಷ್ಯರಿಂದ ತಬಲಾ ವಾದನ ಎಲ್ಲರನ್ನೂ ತಲೆದೂಗುವಂತೆ ಮಾಡಿತು. ಕೊನೆಯಲ್ಲಿ ರೇಖಾ ದಿನೇಶ್ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ಸತೀಶ್ ಹೆಗ್ಗಾರ್ ಹಾರ್ಮೋನಿಯಂ ಜೊತೆಗಾರಿಕೆ ನೀಡಿದರೆ, ಗಣೇಶ್ ಗುಂಡ್ಕಲ್ ತಬಲಾ ಸಾಥ್ ನೀಡಿದರು. ನದಿಯಲ್ಲಿ ಕಾಲು ಇಳಿ ಬಿಟ್ಟು ಸಂಗೀತವನ್ನು ಆಸ್ವಾದಿಸಿದ ನೂರಾರು ಜನರು ಹೊಸ ರೀತಿಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
